‘ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಪರವಾಗಿದೆ’: ವಿಕ್ರಮ್ ಐ. ಆಚಾರ್ಯ
ಮಂಗಳೂರು: ಪುತ್ತೂರಿನಲ್ಲಿ ಮದುವೆಯಾಗುವ ಮುನ್ನವೇ ಮಗು ಜನಿಸಿದ ಪ್ರಕರಣದಲ್ಲಿ ಆರಂಭದಿಂದಲೂ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಪರವಾಗಿದೆ. ಆರೋಪಿಯಾದ ಕೃಷ್ಣ ಜೆ. ರಾವ್ ಎಂಬಾತನೇ ಮಗುವಿನ ತಂದೆ ಎಂಬುದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾದ ಬಳಿಕವೂ ಆರೋಪಿ ಮಗುವಿನ ತಾಯಿಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಪ್ರಕರಣದಲ್ಲಿ ಯುವತಿಗೆ ನ್ಯಾಯ ಸಿಗದಿದ್ದರೆ ವಿಶ್ವಕರ್ಮ ಸಮಾಜ ಪ್ರಬಲ ಹೋರಾಟ ನಡೆಸಲಿದೆ ಎಂದು ವಿಶ್ವಕರ್ಮ ಯುವ ಮಿಲನ್ ಸ್ಥಾಪಕಾಧ್ಯಕ್ಷ ವಿಕ್ರಮ್ ಐ. ಆಚಾರ್ಯ ಹೇಳಿದರು.
ಸಂತ್ರಸ್ತೆಯ ಜತೆ ವಿಶ್ವಕರ್ಮ ಸಮಾಜ ಇಲ್ಲ ಎಂದು ಕೆಲ ರಾಜಕೀಯ ವ್ಯಕ್ತಿಗಳು ಹೇಳಿದ್ದಾರೆ. ನಮ್ಮ ಸಂಘಟನೆ ಪ್ರಕರಣದ ಆರಂಭದಲ್ಲೇ ಯುವತಿ ಮನೆಗೆ ಭೇಟಿ ನೀಡಿ, ಮನೆಯವರಿಗೆ ಧೈರ್ಯ ತುಂಬಿದ್ದೆವು. ಸಂತ್ರಸ್ತೆಯನ್ನು ಮದುವೆಯಾಗುವಂತೆ ಆರೋಪಿಯ ಮನವೊಲಿಸುವ ಪ್ರಯತ್ನ ನಡೆಸಿದ್ದೆವು. ಸಂತ್ರಸ್ತೆಯ ಜತೆಗೆ ವಿಶ್ವಕರ್ಮ ಸಮಾಜ ನಿಂತಿಲ್ಲ ಎಂಬುದು ಸರಿಯಲ್ಲ. ಇನ್ನು ಮುಂದೆಯೂ ಆಕೆಯ ಜತೆ ವಿಶ್ವಕರ್ಮ ಸಮಾಜ ಇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಸಂತ್ರಸ್ತೆಯನ್ನು ಕೃಷ್ಣ ಜೆ.ರಾವ್ ಮದುವೆಯಾಗಬೇಕು ಎಂಬುದು ನಮ್ಮ ಪ್ರಬಲ ಆಶಯ. ಈ ಬಗ್ಗೆ ಹುಡುಗನ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಯುವತಿಗೆ ನ್ಯಾಯ ದೊರಕಿಸುವಂತೆ ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರನ್ನು ಭೇಟಿಯಾಗಿ ಮನವಿ ಮಾಡಲಾಗುವುದು. ಈ ಬಗ್ಗೆ ಗುರುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಶ್ವಕರ್ಮ ಸಮಾಜದ ಪ್ರಮುಖರ ಸಭೆ ಆಯೋಜಿಸಲಾಗಿದೆ. ಸಭೆ ಬಳಿಕ ಹಿಂದು ಸಂಘಟನೆಗಳ ಬೆಂಬಲ ಯಾಚನೆ ಸಹಿತ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನ್ಯಾಯ ದೊರೆಯದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಿದ್ದರಿದ್ದೇವೆ ಎಂದರು.
ಕೃಷ್ಣ ಜೆ.ರಾವ್ ತಂದೆ ಬಿಜೆಪಿಯವರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಪುತ್ತೂರಿನ ಶಾರದೋತ್ಸವವೊಂದರ ಸಮಿತಿಯ ಜವಾಬ್ದಾರಿಯಿಂದ ನಮ್ಮ ಒತ್ತಾಯದಂತೆ ಅವರನ್ನು ವಜಾ ಮಾಡಲಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನ ಕಾಳಿಕಾಂಬಾ ದೇವಸ್ಥಾನ ಮಾಜಿ ಮೊಕ್ತೇಸರ ಲೋಕೇಶ್ ಆಚಾರ್ಯ, ಯುವ ಮಿಲನ್ನ ನವೀನ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಶೇಖರ ಆಚಾರ್ಯ ಉಪಸ್ಥಿತರಿದ್ದರು.