ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಜಾನುವಾರು ರಕ್ಷಣೆ, ಮಾಂಸ ವಶಕ್ಕೆ
Monday, November 17, 2025
ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ನಿವಾಸಿ ಮೈಯದಿ ಎಂಬಾತ ಮನೆಯ ಆವರಣದಲ್ಲಿರುವ ಶೆಡ್ ವೊಂದರ ಬಳಿ ಅಕ್ರಮ ಕಸಾಯಿಖಾನೆಗೆ ಭಾನುವಾರ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಈ ಸಂಬಂಧ ಒರ್ವನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದ್ದು, ಸ್ಥಳದಲ್ಲಿದ್ದ ಸುಮಾರು 150 ಕೆ.ಜಿ. ದನದ ಮಾಂಸವನ್ನು ವಶ ಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಅವರ ನೇತೃತ್ವದ ಪೊಲೀಸರ ತಂಡ ಈ ದಾಳಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯ ಮನೆ ಬಳಿಯ ಶೆಡ್‌ನಲ್ಲಿ ಮೂರು ಮಂದಿ ಸೇರಿ ಅಕ್ರಮವಾಗಿ ಜಾನುವಾರನ್ನು ಅಕ್ತಮವಾಗಿ ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಸಂದರ್ಭ ಸ್ಥಳದಲ್ಲುದ್ದ ಮಯ್ಯದ್ದಿ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಬಂಧಿತ ಆರೋಪಿ ಮೈಯ್ಯದಿಯನ್ನು ನ್ಯಾಯಾಲಯ ಹಾಜರುಪಡಿಸಲಾಗಿದೆ.
ಆರೋಪಿಗಳು ಮನೆಯ ಆವರಣದ ಶೆಡ್‌ನಲ್ಲಿ ಅಕ್ರಮ ಕಸಾಯಿಖಾನೆಯನ್ನು ನಿರ್ಮಾಣ ಮಾಡಿಕೊಂಡು, ಮನೆಯಿಂದಲೇ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಜಾನುವಾರುಗಳ ವಧೆ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆರೋಪಿಯ ಮನೆ ಹಾಗೂ ಶೇಡ್‌ನ ಆವರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿ, ಮಂಗಳೂರು ಸಹಾಯಕ ಆಯುಕ್ತರಿಗೆ ಮುಟ್ಟುಗೋಲಿಗಾಗಿ ಪೊಲೀಸರು ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.