ಗಡಿನಾಡ ಕನ್ನಡಪರ ಸಂಘಟನೆಗಳಿಂದ ಧರಣಿ
ನಮ್ಮ ಭಾಷೆ ನಮ್ಮ ಹಕ್ಕು ಎಂಬ ಬೇಡಿಕೆಯೊಂದಿಗೆ ನಡೆದ ಧರಣಿಯಲ್ಲಿ 18 ಬೇಡಿಕೆ ಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗಿನ ಶಿಕ್ಷಣದಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವ ಮಸೂದೆಯಲ್ಲಿ ಗಡಿನಾಡ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತ ಪರಿಗಣನೆಯೊಂದಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉದ್ಘಾಟಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು. ಕ. ಸಾ. ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು.
ಟಿ. ಶಂಕರನಾರಾಯಣ ಭಟ್, ರವೀಶ ತಂತ್ರಿ ಕುಂಟಾರ್, ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು, ಎಂ. ಸಂಜೀವ ಶೆಟ್ಟಿ, ವಿಶಾಲಾಕ್ಷ ಪುತ್ರಕಳ, ಶಿವರಾಮ ಕಾಸರಗೋಡು, ಉಮೇಶ ಸಾಲಿಯಾನ್, ಗಣೇಶ ಪ್ರಸಾದ ಪಾಣೂರು, ಬೇ. ಸಿ. ಗೋಪಾಲಕೃಷ್ಣ ಭಟ್, ಎನ್.ಕೆ. ಮೋಹನದಾಸ್, ಗುರುಪ್ರಸಾದ ಕೋಟೆಕಣಿ, ಸುಂದರ ಬಾರಡ್ಕ, ಸವಿತಾ ಟೀಚರ್, ಜಯನಾರಾಯಣ ತಾಯನ್ನೂರು ಮೊದಲಾದವರು ಧರಣಿಗೆ ನೇತೃತ್ವ ನೀಡಿದರು. ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ಕೇರಳ ಮಲಯಾಳ ಭಾಷಾ ಮಸೂದೆ ಮೂಲಕ ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳ ಭಾಷೆ ಹೇರುವ ಹುನ್ನಾರ ನಿಲ್ಲಿಸಬೇಕು. ಕೇರಳದಲ್ಲಿ ಭಾಷೆ ಅಲ್ಪಸಂಖ್ಯಾತ ಕನ್ನಡಿಗರು/ತಮಿಳು ಭಾಷಿಗರ ಹಿತ ರಕ್ಷಿಸಬೇಕು. ಸರಕಾರದ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಎಲ್ಲಾ ಪ್ರಕಟಣೆ, ಅರ್ಜಿ, ರಶೀದಿ, ಸುತ್ತೋಲೆ ಕನ್ನಡದಲ್ಲಿಯೂ ಒದಗಿಸಬೇಕು, ಎಲ್ಲಾ ಬಸ್ಸು ಗಳಲ್ಲಿ ರಾಷ್ಟ್ರೀಯ ಹೆದ್ದಾರಿ (ತಲಪಾಡಿಯಿಂದ ಚೆರ್ಕಳ ತನಕ) ಮತ್ತು ರಾಜ್ಯ ಹೆದ್ದಾರಿಯ ಬದಿ ಪ್ರದರ್ಶಿಸುವ ಸ್ಥಳನಾಮಗಳನ್ನು ಕನ್ನಡದಲ್ಲಿಯೂ ಬರೆಯಬೇಕು, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿರುವ ಸಂಸ್ಕೃತ, ಇಂಗ್ಲೀಷ್, ಹಿಂದಿ, ಡ್ರಾಯಿಂಗ್, ಸಂಗೀತ, ಫಿಸಿಕಲ್ ಎಜುಕೇಶನ್ ಶಿಕ್ಷಕ ಮೊದಲಾದ ಹುದ್ದೆಗಳಿಗೆ ಕನಿಷ್ಠ ಒಂದರಿಂದ ಹತ್ತರ ತನಕ ಕನ್ನಡ ಮಾಧ್ಯಮ ದಲ್ಲಿ ಅಧ್ಯಯನ ಮಾಡಿದವರನ್ನು ನೇಮಿಸಲು ಸೂಕ್ತ ತಿದ್ದುಪಡಿ ತರಬೇಕು, ಮೂಲ ವಿಷಯಗಳಿಗೆ ಸಂಬಂಧಿಸಿದ ಶಿಕ್ಷಕರ ಕೈಪಿಡಿ ಯನ್ನು ಕನ್ನಡದಲ್ಲಿ ಒದಗಿಸಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.