ವಿದ್ಯುತ್ ಕಡಿತದ ವಿರುದ್ಧ ವಿಚಿತ್ರ ಪ್ರತಿಭಟನೆ

ವಿದ್ಯುತ್ ಕಡಿತದ ವಿರುದ್ಧ ವಿಚಿತ್ರ ಪ್ರತಿಭಟನೆ

ಕಾಸರಗೋಡು: ಬಿಲ್ ಪಾವತಿಸದ ಹಿನ್ನಲೆಯಲ್ಲಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕೆಎಸ್‌ಇಬಿ ವಿರುದ್ಧ ವ್ಯಕ್ತಿಯೊಬ್ಬರು ವಿಚಿತ್ರ ರೀತಿಯ ಪ್ರತಿಭಟನೆ ನಡೆಸಿದ ಘಟನೆಯೊಂದು ನಗರದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರ ಮನೆಯ ವಿದ್ಯುತ್ ಸಂಪರ್ಕವನ್ನು ಕೆಎಸ್‌ಇಬಿ ಅಧಿಕಾರಿಗಳು ಕಡಿತಗೊಳಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ನಗರದ 50ಕ್ಕೂ ಅಧಿಕ ಕಡೆಯ ಫ್ಯೂಸ್ ತೆಗೆದು ಸಾವಿರಾರು ಮಂದಿಗೆ ವಿದ್ಯುತ್ ಅಡಚಣೆ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿ ಸೂರ್ಲು ನಿವಾಸಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೇಟೆಯ ನೆಲ್ಲಿಕುಂಜೆ, ಕಾಸರಗೋಡು ಸೆಕ್ಷನ್ ನ ಫ್ಯೂಸ್ ಗಳನ್ನು ಈತ ತೆಗೆದಿದ್ದರಿಂದಾಗಿ ವ್ಯಾಪಾರ, ವಾಣಿಜ್ಯ ಸಂಸ್ಥೆಗಳ ಸಹಿತ ಸಾವಿರಾರು ಮಂದಿ ಬಳಕೆದಾರರು ತಾಸುಗಳ ಕಾಲ ಕತ್ತಲೆಯಲ್ಲಿ ಕಾಲ ಕಳೆಯುವಂತೆಯಾಗಿದೆ.

ಈ ವ್ಯಕ್ತಿಯು ಪಾವತಿಸಬೇಕಿದ್ದ 22 ಸಾವಿರ ರೂ. ಬಿಲ್ ಪಾವತಿಸದ ಹಿನ್ನಲೆಯಲ್ಲಿ ಸಿಬಂದಿಗಳು ಮನೆಯ ಫ್ಯೂಸ್ ತೆಗೆಯದೇ, ಕಂಬದಿಂದ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಕೋಪಗೊಂಡ ಮನೆಯ ವ್ಯಕ್ತಿ ವಿದ್ಯುತ್ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದನು. ಈತ ಮರಳಿದ ಬೆನ್ನಲ್ಲೇ ಹಲವೆಡೆಗಳಿಂದ ವಿದ್ಯುತ್ ಸಂಪರ್ಕ ಕಡಿತದ ದೂರಿನ ಕರೆಗಳು ಬಂದವು. ಇದರಂತೆ ಸಿಬಂದಿಗಳು ಪರಿಶೀಲನೆ ನಡೆಸಿದಾಗ ನಗರದ ಅನೇಕ ಟ್ರಾನ್ಸ್ ಫರ್ಮರ್ ಗಳಿಂದ ಫ್ಯೂಸ್ ತೆಗೆದಿರುವುದು ಬೆಳಕಿಗೆ ಬಂದಿದೆ.

ಇದರಂತೆ ಅಧಿಕಾರಿಗಳು ಕಾಸರಗೋಡು ನಗರ ಠಾಣೆಗೆ ದೂರು ನೀಡಿದ್ದು, ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಕೆಲವು ಫ್ಯೂಸ್‌ಗಳನ್ನು ಪೊದೆಗಳಿಗೆ ಎಸೆದಿರುವುದು ಕಂಡುಬಂದಿದೆ. ಸಿಕ್ಕ ಕೆಲ ಫ್ಯೂಸ್‌ಗಳನ್ನು ಮರು ಅಳವಡಿಸಿ, ಹೊಸ ಫ್ಯೂಸ್‌ಗಳನ್ನು ಜೋಡಿಸಿ ವಿದ್ಯುತ್ ಸರಬರಾಜು ಪುನಃಸ್ಥಾಪಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article