ನ.16 ರಂದು ಮಹಿಳಾ ನ್ಯಾಯ ಸಮಾವೇಶ, ಜಾಥಾ
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದವರು ಯಾರು ಎಂಬ ಸತ್ಯವನ್ನು ಹೊರತರುವ ದಿಕ್ಕಿನಲ್ಲಿ ಎಸ್‌ಐಟಿ ತನಿಖೆ ನಡೆಯಬೇಎಂದು ಒತ್ತಾಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಾಗೂ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೊಂದವರು ಯಾರು ಎಂಬ ಆಂದೋಲನ ಆಗಸ್ಟ್‌ನಲ್ಲಿ ಆರಂಭಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದ ಪ್ರಕರಣಳ ಸಂತ್ರಸ್ತರ ಕುಟುಂಬಗಳೊಂದಿಗೆ ನಿಲ್ಲುವುದು ನಮ್ಮ ಉದ್ದೇಶ ಎಂದರು.
ಕಳೆದ 13 ವರ್ಷಗಳಿಂದ ಮಹಿಳಾ ಸಂಘಟನೆಗಳು ಅತ್ಯಾಚಾರ ವಿರೋಧಿ ದಿನವನ್ನಾಗಿ ಆಚರಿಸುತ್ತಿವೆ. ಕಳೆದ ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕುಗಳು ಮತ್ತು ಘಟನೆಗಾಗಿ ವಿವಿಧ ಮಹಿಳಾ ಸಂಘಟನೆಗಳು ಕೆಲಸ ನಿರ್ವಹಿಸುತ್ತಿದ್ದು, ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿ ದೂರು ನೀಡಿದ ಹಾಗೂ ನೊಂದವರ ಕುಟುಂಬಗಳನು ನಾವು ಸಂಪರ್ಕಿಸಿ ಸಾಂತ್ವಾನ ಹೇಳಿದ್ದೇವೆ. ಎಸ್‌ಐಟಿಯಿಂದ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ಹೋರಾಟ ನಡೆಯಲಿದೆ ಎಂದು ಅಭಿಯಾನದ ಸದಸ್ಯೆ ಮಲ್ಲಿಗೆ ತಿಳಿಸಿದರು.
ಎಸ್‌ಐಟಿ ರಚನೆಯ ಆದೇಶವು ಸ್ಪಷ್ಟವಾಗಿ ಹೇಳುವಂತೆ ವಿಚಾರಣೆ ಕೇವಲ ಸಾಮೂಹಿಕ ಹೆಣ ಹೂಳುವಿಕೆಯ ಕುರಿತಾಗಿ ಮಾತ್ರವಲ್ಲ. ಇನ್ನಿತರ ಎಲ್ಲ ವಿಚಾರಗಳ ಸಮಗ್ರ ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹ. ಎಸ್‌ಐಟಿ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕುವ ಸುತ್ತ ಕೇಂದ್ರೀಕೃತವಾಗಿರಬೇಕೇ ಹೊರತು ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂಬುದನ್ನು ಗಟ್ಟಿದನಿಯಲ್ಲಿ ನಾವು ಪ್ರತಿಪಾದಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಅಭಿಯಾನದ ಸದಸ್ಯೆ ಜ್ಯೋತಿ ಮಾತನಾಡಿ, ಧರ್ಮಸ್ಥಳ ಪ್ರಕರಣಗಳಿಗೆ ಸಂಬಂಧಿಸಿ ದೂರುದಾರರು ಹಾಗೂ ಸಾಕ್ಷಿಗಳನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದ್ದು, ಎಸ್‌ಐಟಿಯಿಂದ ಪ್ರಾಮಾಣಿಕ ತನಿಖೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಮಹಿಳಾ ನಿಯೋಗ ಭೇಟಿ ಮಾಡಿ ಒತ್ತಾಯಿಸಿದ್ದು, ಪ್ರಾಮಾಣಿಕ ತನಿಖೆಯ ಭರವಸೆ ನೀಡಿದ್ದಾರೆ ಎಂದರು.
ರೈತ ಸಂಘದ ಮುಖಂಡೆ ಅನಸೂಯಮ್ಮ ಅರಲಾಲುಸಂದ್ರ, ಕಲಾವಿದೆ ಮತ್ತು ಲೇಖಕಿ ಗೀತಾ ಸುರತ್ಕಲ್, ಸೌಜನ್ಯ ಪರ ಹೋರಾಟಗಾರರಾದ ಶಶಿಕಲಾ, ಮಹಿಳಾ ಪರ ಹೋರಾಟಗಾರರಾದ ಸುನೀತಾ ಲಂಬಾಣಿ, ಭಾಗ್ಯಜ್ಯೋತಿ, ಗುಲಾಬಿ ಬಿಳಿಮಲೆ ಮೊದಲಾದವರು ಉಪಸ್ಥಿತರಿದ್ದರು.