ರಾಜ್ಯಮಟ್ಟದ ರಬ್ಬರ್ ಬೆಳೆಗಾರರ ಸಮ್ಮೇಳನ
ಮಂಗಳೂರು: ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತು ಸಂಸ್ಕರಣ ಸಹಕಾರ ಸಂಘ ಹಾಗೂ ರಾಜ್ಯ ರಬ್ಬರ್ ಮಾರ್ಕೆಟಿಂಗ್ ಸೊಸೈಟಿಗಳ ಆಶ್ರಯದಲ್ಲಿ ನ. 29ರಂದು ಉಜಿರೆಯಲ್ಲಿ ರಾಜ್ಯಮಟ್ಟದ ರಬ್ಬರ್ ಬೆಳೆಗಾರರ ಸಮ್ಮೇಳನ ನಡೆಯಲಿದೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮ್ಮೇಳನದ ಅಧ್ಯಕ್ಷ ಶ್ರೀಧರ ಜಿ. ಭಿಡೆ, ರಬ್ಬರ್ ಬೆಳೆಯನ್ನು ತೋಟಗಾರಿಕಾ ಬೆಳೆಯಾಗಿ ಪರಿಗಣಿಸಬೇಕು. ರಬ್ಬರ್ ಆಮದಿನ ಮೇಲಿನ ಸುಂಕ ಹೆಚ್ಚಿಸಬೇಕು. ರಬ್ಬರಿನ ತಳಹದಿ ಬೆಲೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನಿಗದಿಪಡಿಸಬೇಕು. ಕೆಜಿಗೆ 250 ರೂ. ಬೆಲೆ ನಿಗದಿಪಡಿಸಲು ರಾಜ್ಯ ಸರಕಾರ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಬೇಕು ಎಂಬ ಬೇಡಿಕೆಗಳಿಗೆ ಒತ್ತಾಯಿಸಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ವಹಿಸಲಿದ್ದಾಎ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವರದಿ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಅರ್ಥಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ ದಿಕ್ಸೂಚಿ ಭಾಷಣ ನೀಡಲಿದ್ದು, ಭಾರತದಲ್ಲಿ ರಬ್ಬರ್ ಕೃಷಿಯ ಭವಿಷ್ಯದ ಬಗ್ಗೆ ಎಂ. ವಸಂತಗೇಸನ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಸಮ್ಮೇಳನದಲ್ಲಿ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಕೋರಿಕೆ ಮೇರೆಗೆ ಡಾ. ವಿಘ್ನೇಶ್ವರ ವರ್ಮುಡಿ ತಯಾರಿಸಿರುವ ‘ನ್ಯಾಚುರಲ್ ರಬ್ಬರ್ ಇಕಾನಮಿ ಇನ್ ಕರ್ನಾಟಕ, ಆಟ್ಕ್ರಾಸ್ ರೋಡ್’ ಎಂಬ ವರದಿ ಮಂಡನೆ ಆಗಲಿದೆ. ರಬ್ಬರ್ ಬೆಳೆಗಾರರ ಪರ ಬೇಡಿಕೆಗಳನ್ನು ಸರಕಾರ ಮುಂದಿಟ್ಟು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ದ.ಕ. ಜಿಲ್ಲೆಯಲ್ಲಿ ರಬ್ಬರ್ ಬೆಳೆಯುವ ಪ್ರಮುಖ ಸ್ಥಳವಾಗಿದೆ. ರಾಜ್ಯದಲ್ಲಿ ಒಟ್ಟು 8.75 ಲಕ್ಷ ಟನ್ ರಬ್ಬರ್ ಬೆಳೆಸಲಾಗುತ್ತಿದ್ದು, 14.12 ಲಕ್ಷ ಟನ್ ಬೇಡಿಕೆ ಇದೆ. ಸುಮಾರು 6 ಲಕ್ಷ ಟನ್ ರಬ್ಬರನ್ನು ಆಸಿಯಾನ, ಆಫ್ರಿಕಾ, ಸಾರ್ಕ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರಬ್ಬರ್ ಬೆಳೆ ಇಳಿಕೆಯಿಂದಾಗಿ ಈಗಾಗಲೇ ಶೇ. 30ರಷ್ಟು ಬೆಳೆಗಾರರು ರಬ್ಬರ್ ತೋಟಗಳಿಂದ ವಿಮುಖರಾಗಿದ್ದಾರೆ. ಉತ್ಪಾದನಾ ವೆಚ್ಚವನ್ನು ತೂಗಿಸಲಾಗದೆ ರೈತರು ರಬ್ಬರ್ ಮರಗಳನ್ನು ಕಡಿಯುತ್ತಿದ್ದಾರೆ. ಹಾಗಾಗಿ ರಬ್ಬರ್ ಆಮದಿನ ಮೇಲಿನ ಸುಂಕ ಹೆಚ್ಚಿಸಬೇಕು. ಸದ್ಯ ರಬ್ಬರ್ ಬೆಲೆ 190 ರೂ.ಗಳಿದ್ದು, ಅದನ್ನು 250 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನ ಸಂಯೋಜಕ ಅನಂತ ಭಟ್ ಎಂ. ಮುಂಡಾಜೆ, ಉಪಾಧ್ಯಕ್ಷ ಪ್ರಸಾದಂ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.