ಜಾರಿಗೊಳ್ಳದ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ: ನ.24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿಐಟಿಯು ನಿರ್ಧಾರ
ಮಂಗಳೂರು: ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಟ ಕೂಲಿ, 2024ರ ಎಪ್ರಿಲ್‌ನಿಂದ ಜಾರಿಗೊಂಡ ಹೊಸ ಕನಿಷ್ಟ ಕೂಲಿ ಸೇರಿದಂತೆ ಬಾಕಿಯನ್ನು ನೀಡುವಂತೆ ಒತ್ತಾಯಿಸಿ ನ.24ರಿಂದ ಬೀಡಿ ಕಾರ್ಮಿಕರು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಸಂಘಟನೆಯ ವತಿಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಸಮಸ್ಯೆಯ ಇರ್ತಥ್ಯಕ್ಕಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಲಾಗಿದೆ. ನ.24ರಿಂದ 27ರವರೆಗೆ ಹಗಲು ರಾತ್ರಿ ಮಂಗಳೂರು ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ನ.28ರಂದು ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ಚಲೋ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯ ಸರಕಾರ 2018ರ ಎಪ್ರಿಲ್‌ನಲ್ಲಿ ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಅಧಿಸೂಚನೆ ಹೊರಡಿಸಿತ್ತು. ಸಾವಿರ ಬೀಡಿಗೆ ಆ ಸಮಯದಲ್ಲಿ 210 ರೂ. ಹಾಗೂ ಬೆಲೆ ಏರಿಕೆ ಸೂಚ್ಯಂಕದ ಮೇರೆಗೆ ಪಾಯಿಂಟ್‌ಗೆ 4 ಪೈಸೆಯಂತೆ ತುಟ್ಟಿ ಬತ್ತೆ ಸೇರಿ ಕನಿಷ್ಟ ಕೂಲಿಯನ್ನು ಬೀಡಿ ಮಾಲಕರು ನೀಡಬೇಕಿತ್ತು. ಸರ್ವಾನುಮತದಿಂದ ಒಪ್ಪಿಕೊಂಡ ಕನಿಷ್ಟ ಕೂಲಿಯಾಗಿದ್ದರೂ ಬೀಡಿ ಮಾಲಕರು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಆರು ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧ ಕೂಲಿ ನೀಡದೆ ಮೋಸ ಮಾಡಿದ್ದಾರೆ.
2025ರ ಫೆಬ್ರವರಿ ತಿಂಗಳಲ್ಲಿ ಕನಿಷ್ಟ ಕೂಲಿಯನ್ನು ಕರ್ನಾಟಕ ಸರಕಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ. ಕನಿಷ್ಟ ಕೂಲಿ ನಿಗದಿಗೆ ಸೆಕ್ಷನ್ 5(1ಎ) ಅನ್ವಯ ಸಮಿತಿ ರಚಿಸಿದ್ದು, ಸಮಿತಿಯ ತೀರ್ಮಾನದಂತೆ 2024ರ ಎಪ್ರಿಲ್ 1ರಿಂದ ಸಾವಿರ ಬೀಡಿಗೆ 270 ರೂ. ಕನಿಷ್ಟ ಕೂಲಿ ಮತ್ತು ಬೆಲೆ ಏರಿಕೆ ಸೂಚ್ಯಂಕ ಪಾಯಿಂಟ್‌ಗೆ 3 ಪೈಸೆಯಂತೆ ಅಧಿಸೂಚನೆ ನೀಡಿತ್ತು. ಆ ಪ್ರಕಾರ ಸಾವಿರ ಬೀಡಿಗೆ 301.92ರಂತೆ ಬೀಡಿ ಕಾರ್ಮಿಕರಿಗೆ ಮಾಲಕರು ವೇತನ ನೀಡಬೇಕು. ಆದರೆ ಬೀಡಿ ಮಾಲಕರು ಸಾವಿರ ಬೀಡಿಗೆ 284.88 ರೂ.ನಂತೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 10 ಲಕ್ಷ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 3ಲಕ್ಷದಷ್ಟು ಬಡವರು ಬೀಡಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರೇ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, 2018ರಿಂದ 2024ರವರೆಗಿನ ಕನಿಷ್ಟಕೂಲಿ ಬಾಕಿ ಏಕಗಂಟಿನಲ್ಲಿ ಪರಿಹಾರವವಾಗಿ ನೀಡಬೇಕಿದೆ. ಅದಲ್ಲದೆ 2024ರ ಎಪ್ರಿಲ್‌ನಿಂದ ಜಾರಿಯಾದ ಕನಿಷ್ಟ ಕೂಲಿ ಹಾಗೂ ಪ್ರಸಕ್ತ ನಿಗದಿಗೊಳಿಸಿದ 301.92 ರೂ. ದರವನ್ನು ಬೀಡಿ ಮಾಲಕರು ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದವರು ಹೇಳಿದರು.
ಬೀಡಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿಧಾನ ಸೌಧದ ಒಳಗಾಗಲಿ ಹೊರಗಾಗಲಿ ಧ್ವನಿ ಎತ್ತಲು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಹಾಗಾಗಿ ನಮಗೆ ಇದೀಗ ಹೋರಾಟವೊಂದೇ ನಮ್ಮ ಮುಂದಿರುವ ದಾರಿ. ಈ ಬಗ್ಗೆ ಕ್ರಮ ವಹಿಸಬೇಕಾದ ಕಾರ್ಮಿಕರ ಇಲಾಖೆಯೂ ಮಾಲಕರ ಹಿತರಕ್ಷಣೆಯಲ್ಲೇ ಕಾಲ ಕಳೆಯುತ್ತಿದೆ ಎಂದು ಉಪಾಧ್ಯಕ್ಷ ಬಿ.ಎಂ. ಭಟ್ ಆಕ್ಷೇಪಿಸಿದರು.
ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ಕೋಶಾಧಿಕಾರಿ ಸದಾಶಿವ ದಾಸ್, ಉಪಾಧ್ಯಕ್ಷರಾದ ವಸಂತ ಆಚಾರ್, ಪದ್ಮಾವತಿ ಶೆಟ್ಟಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.