ಕೆಂಪು ಕಲ್ಲು ದರ ದುಬಾರಿ: ಬಡವರಿಗೆ ಮನೆ ನಿರ್ಮಾಣ ಸಂಕಷ್ಟ
ಮಂಗಳೂರು: ಕೆಂಪುಕಲ್ಲಿನ ಗಣಿಗಾರಿಕೆ ಮೇಲಿನ ರಾಜಧನ ಇಳಿಕೆಯಾಗಿದ್ದರೂ ಕೆಂಪು ಕಲ್ಲು ದರ ಮಾತ್ರ ದುಬಾರಿಯಾಗಿರುವ ಕಾರಣ ದ.ಕ. ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿಲ್ಲ. ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲೆಯ ಶಾಸಕರು ಆಗ್ರಹಿಸಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರಳ್ಯ ಕೆಂಪು ಕಲ್ಲಿನ ದರ ದುಬಾರಿಯಾಗಿರುವ ಬಗ್ಗೆ ಆಕ್ಷೇಪಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ವಿಷಯ ಪ್ರಸ್ತಾಪಿಸಿ, ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರಿಗೆ ರಾಜಧನ ಹೆಚ್ಚಳವಾಗಿದೆ ಎಂಬ ಕಾರಣದಿಂದ ನಾವೆಲ್ಲಾ ಪ್ರಯತ್ನಿಸಿ ಸರಕಾರದ ಮೂಲಕ ಕಡಿಮೆ ಮಾಡಲಾಗಿದೆ. ಹಿಂದೆ 30 ರೂ.ಗಳಿಗೆ ಸಿಗುತ್ತಿದ್ದ ಕೆಂಪುಕಲ್ಲಿನ ದರ ಪ್ರಸಕ್ತ 55 ರೂ. ಆಗಿದೆ. ರಾಜಧನ ಕಡಿಮೆಯಾಗಿದ್ದರೂ ಕೆಂಪುಕಲ್ಲು ಪೂರೈಕೆದಾರರು ದರ ಇಳಿಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರು ಕೆಂಪು ಕಲ್ಲಿನ ದುಬಾರಿ ಬೆಲೆ ಹಾಗೂ ಮರಳಿನ ಸಮಸ್ಯೆಯಿಂದಾಗಿ ಮನೆ ಪೂರ್ಣಗೊಳಿಸಲು ಸಾಧ್ಯವಾಗದೆ ಗೃಹ ಪ್ರವೇಶ ಮಾಡಲಾಗದೆ ಸಂಕಷ್ಟ ಪಡುವಂತಾಗಿದೆ ಎಂದು ಹರೀಶ್ ಪೂಂಜ ಹೇಳಿದಾಗ ಇತರ ಶಾಸಕರು ಕೂಡಾ ದನಿಗೂಡಿಸಿದರು.
ಈ ಬಗ್ಗೆ ಈಗಾಗಲೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರ ಅಸೋಶಿಯೇಶನ್ ಜತೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ರಾಜಧನ ದುಬಾರಿ ಇದೆ ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಟನ್ಗೆ 295 ರೂ.ಗಳಿದ್ದ ರಾಜಧನವನ್ನು 100 ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ಹಾಗಿದ್ದರೂ ದರ ಇಳಿಕೆಗೆ ಮುಂದಾಗದಿರುವುದು ಗಮನಕ್ಕೆ ಬಂದಿದೆ. ಈ ರೀತಿ ಮುಂದುವರಿದರೆ ಜಿಲ್ಲಾಡಳಿತದಿಂದ ಮುಂದೆ ಯಾವುದೇ ಸಹಕಾರ ಸಿಗದು ಎಂಬುದನ್ನು ಅಸೋಶಿಯನ್ನವರಿಗೆ ಸ್ಪಷ್ಟಪಡಿಸಲಾಗಿದೆ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಮರಳಿನ ಕೊರತೆಯ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈಗಾಗಲೇ ಜಿಲ್ಲೆಯಲ್ಲಿ ಸಿಆರ್ಝೆಡೇತರ ವಲಯದಲ್ಲಿ 16 ಬ್ಲಾಕ್ಗಳಲ್ಲಿ ಟೆಂಡರ್ ಕರೆಯಲಾಗಿದೆ. 4 ಕಡೆ ಲೈವ್ ಬಿಡ್ಡಿಂಗ್ ಆಗಿದೆ. 18 ಕಡೆ ಎಸಿ ಹಂತದಲ್ಲಿದೆ. ಒಟ್ಟು 38 ಹೊಸ ಬ್ಲಾಕ್ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಬಿಡ್ಡುದಾರರು ಇಲ್ಲದಿದ್ದಲ್ಲಿ ಮರು ಟೆಂಡರ್ ಕರೆಯಲಾಗುವುದು. ಸಿಆರ್ಝೆಡ್ ವ್ಯಾಪ್ತಿಯಲ್ಲಿ ಇನ್ನೂ ಅನುಮತಿ ದೊರಕಿಲ್ಲ ಎಂದು ಹೇಳಿದರು.
ಚಿಕಿತ್ಸೆಗೆ ತೊಂದರೆ..
ಇಎಸ್ಐನಡಿ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ. ರಾಜ್ಯ ಸರಕಾರದಿಂದ ನವೀಕರಣ ವ್ಯವಸ್ಥೆ ಆಗದ ಕಾರಣ ಇಎಸ್ಐ ಕಾರ್ಡ್ ಹೊಂದಿದವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಸಭೆಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಈ ಬಗ್ಗೆ ರಾಜ್ಯ ವೈದ್ಯಕೀಯ ಇಲಾಖೆಯ ಆಯುಕ್ತರ ಬಳಿ ಚರ್ಚಿಸುವುದಾಗಿ ತಿಳಿಸಿದರು.