ಆಯುಷ್ ಔಷಧಿ ಖರೀದಿಯಲ್ಲಿ ಅಕ್ರಮ, ಅವಧಿ ಮೀರಿದ ಔಷಧ ಪೂರೈಕೆ: ಶಾಸಕ ಕಾಮತ್

ಆಯುಷ್ ಔಷಧಿ ಖರೀದಿಯಲ್ಲಿ ಅಕ್ರಮ, ಅವಧಿ ಮೀರಿದ ಔಷಧ ಪೂರೈಕೆ: ಶಾಸಕ ಕಾಮತ್


ಮಂಗಳೂರು: ಆಯುಷ್  ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣದ ಆಸೆಗೆ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಆರೋಪಿಸಿದರು.

ಅಟಲ್ ಸೇವಾ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮಗಳ ಕುರಿತು ದಾಖಲೆಗಳ ಸಹಿತ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಇದು ಸಾರ್ವಜನಿಕರ ಆರೋಗ್ಯದ ವಿಷಯವಾಗಿದ್ದರೂ ಗಂಭೀರವಾಗಿ ಪರಿಗಣಿಸದ ಇಲಾಖೆಯ ನಿರ್ಲಕ್ಷ್ಯ ಖಂಡನೀಯ. ಯಾರನ್ನು ರಕ್ಷಿಸಲು ಇಲ್ಲಿ ಹುನ್ನಾರ ನಡೆಯುತ್ತಿದೆ ? ಇದರ ಹಿಂದೆ ಯಾರಿದ್ದಾರೆ? ಯು.ಟಿ ಖಾದರ್, ಐವನ್ ಡಿಸೋಜ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲೆಯೇ ಸಾರ್ವಜನಿಕರ ಸಂಶಯ ಮೂಡುವಂತಾಗಿದೆ. ಇದೀಗ ಅಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಆರೋಪಕ್ಕೆ ಪೂರಕವಾಗಿ ಕೆಲವು ದಾಖಲೆಗಳು ಲಭಿಸಿದೆ ಎಂದು ವರದಿಯಾಗಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೇ ಸೂಕ್ತ ತನಿಖೆ ಮುಂದುವರಿದರೆ ಮತ್ತಷ್ಟು ವಿಷಯಗಳು, ಕಾಣದ ಕೈಗಳು ಹೊರಗೆ ಬರುವ ನಿರೀಕ್ಷೆ ಇದೆ.   ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ನಿರಂತರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.

ಕದ್ರಿ ಟೋಲ್..

ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್ ವಿಧಿಸಲು ಚಿಂತನೆ ನಡೆಸಿರುವುದು ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕದ್ರಿ ಪಾರ್ಕ್ ಬಳಿಯ ಗೂಡಂಗಡಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಇದೀಗ ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಇಲ್ಲಿನ ದುಡಿಯುವ ವರ್ಗದ ಜನತೆಗೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ ಎನ್ನುತ್ತಲೇ, ಪರ್ಯಾಯ ವ್ಯವಸ್ಥೆ ಕೂಡಾ ಮಾಡದೇ, ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗದ ಮೇಲಿನ ಪ್ರಹಾರವಾಗಿದ್ದು ಖಂಡನೀಯ ಎಂದರು.

ಜಾಮರ್ ಸಮಸ್ಯೆ..

ನಗರದ ಜೈಲ್ ಜಾಮರ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಸಚಿವರ ಗಮನಕ್ಕೆ ತಂದೂ ಆಯ್ತು, ಕೊನೆಗೆ ಅನಿವಾರ್ಯವಾಗಿ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಯಿತು. ಆದರೂ ಇಲ್ಲಿನ ಜನರ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ.  ಇದೀಗ ಇಲ್ಲಿನ ವಕೀಲರ ಮೂಲಕ ಸ್ವತಃ ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಇನ್ನಾದರೂ ಈ ದಪ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳಲಿ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇ-ಖಾತಾ ಗೊಂದಲ..

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯ ಎಂದ ಅವರು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ತೊಂದರೆ ಅನುಭವಿಸಿರುವ ಅನೇಕ ಪ್ರಕರಣಗಳು ನಡೆದಿದೆ. ಆದರೂ ಆಳುವ ಸರ್ಕಾರ ದುರಸ್ಥಿಗೆ ಅನುದಾನ ನೀಡದೇ ಕಣ್ಣು ಮುಚ್ಚಿ ಕೂತಿದೆ. ನಗರದಲ್ಲಿ ಕಸದ ಸಮಸ್ಯೆಯಂತೂ ಹೇಳತೀರದಾಗಿದೆ ಎಂದರು.

ಅಭಿವೃದ್ಧಿ ಪಾತಾಳ..

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ವಿಷಯಗಳು ಪಾತಾಳಕ್ಕಿಳಿದಿದ್ದರೂ, ಬೆಲೆ ಏರಿಕೆ, ಭ್ರಷ್ಟಾಚಾರಗಳು ಮಾತ್ರ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಅನುದಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಯಾವುದೇ ಅನುದಾನಗಳು ಬರುತ್ತಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಆಗಬೇಕಿರುವ ತುರ್ತು ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ? 

ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ವೈಫಲ್ಯ ಅನುಭವಿಸಿದ್ದು ಮಾತ್ರವಲ್ಲದೇ ನಮ್ಮ ಮಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಅಕ್ಷಮ್ಯವಾಗಿದೆ. ಮಂತ್ರಿಗಳು ಜಿಲ್ಲೆಗೆ ಬಂದಾಗ ಕಾಟಾಚಾರಕ್ಕೆ ಕೋಟಿ ಕೋಟಿ ರೂ. ಗಳನ್ನು ಘೋಷಣೆ ಮಾಡಿ ಹೋಗುತ್ತಾರೆ. ಆ ನಂತರ ಅದು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವ ಸುಳ್ಳು ಘೋಷಣೆಗಳು, ಸುಳ್ಳು ಭರವಸೆಗಳು ನಮ್ಮ ಕ್ಷೇತ್ರಕ್ಕೆ ಜಿಲ್ಲೆಗೆ ಅಗತ್ಯವಿಲ್ಲ ಎಂದು ಹೇಳಿದರು.

ಮಂಡಲದ ಅಧ್ಯಕ್ಷ ಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article