ಜೈಲಿನಲ್ಲಿ ವಿಚಾರಣಾಧಿನ ಕೈದಿಯ ನಿಗೂಢ ಸಾವು
ಮಂಗಳೂರು: ಕಾಸರಗೋಡು ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ದೇಳಿ ನಿವಾಸಿ ಮುಬಶ್ಶಿರ್(30) ಮೃತಪಟ್ಟ ವಿಚಾರಣಾಧೀನ ಕೈದಿ.
ಬುಧವಾರ ಮುಂಜಾನೆ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಮುಬಶ್ಶಿರ್ ನನ್ನು ಜೈಲು ಸಿಬ್ಬಂದಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಕಾರಣ ಬಂದಿಲ್ಲ. ಈ ಮಧ್ಯೆ ಇದೊಂದು ಕೊಲೆ ಕೃತ್ಯ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮುಬಶ್ಶಿರ್ ವಿರುದ್ಧ 2016ರಲ್ಲಿ ಪೊಕ್ಸೊ ಪ್ರಕರಣವೊಂದು ದಾಖಲಾಗಿತ್ತು. ಈ ಮಧ್ಯೆ ವಿದೇಶಕ್ಕೆ ತೆರಳಿದ್ದ ಮುಬಶ್ಶಿರ್ ಎರಡು ತಿಂಗಳ ಹಿಂದೆ ಊರಿಗೆ ಮರಳಿದ್ದನು. ಇದನ್ನು ಅರಿತ ಪೊಲೀಸರು ನವಂಬರ್ ಐದರಂದು ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವು ಮುಬಶ್ಶಿರ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಸೋಮವಾರ ಹಾಗೂ ಮಂಗಳವಾರ ಕುಟುಂಬಸ್ಥರು ಸಬ್ ಜೈಲಿಗೆ ಮುಬಶ್ಶಿರ್ ನನ್ನು ಸಂದರ್ಶಿಸಿದ್ದರು. ಈ ವೇಳೆ ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮುಬಶ್ಶಿರ್ ಸಾವಿನ ಅನುಮಾನ ವ್ಯಕ್ತ ಪಡಿಸಿರುವ ಕುಟುಂಬಸ್ಥರು ತನಿಖೆಗೆ ಒತ್ತಾಯಿಸಿದ್ದಾರೆ.