ಚೆಕ್ ಬೌನ್ಸ್ ಕೇಸ್‌ನಲ್ಲಿ ಹೆಡ್ ಮಾಸ್ಟರ್‌ಗೆ ಜೈಲು ಶಿಕ್ಷೆ: ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಶಿಕ್ಷಕ

ಚೆಕ್ ಬೌನ್ಸ್ ಕೇಸ್‌ನಲ್ಲಿ ಹೆಡ್ ಮಾಸ್ಟರ್‌ಗೆ ಜೈಲು ಶಿಕ್ಷೆ: ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಶಿಕ್ಷಕ

ಮಂಗಳೂರು: ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಪ್ರಾಥಮಿಕ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನಿಗೆ ಜೈಲು ಶಿಕ್ಷೆ ವಿಧಿಸಿದ ಮಂಗಳೂರಿನ ಒಂಭತ್ತನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ಬಂಟ್ವಾಳದ ಕಾವಳಕಟ್ಟೆಯಲ್ಲಿರುವ ಕಲೈ ಚಂದ್ರಮೌಳಿ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್ ಎಸ್. ನಾಯಕ್ ಶಿಕ್ಷೆಗೊಳಗಾದ ಅಪರಾಧಿ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕೊಡಿಯಾಲ್‌ಬೈಲ್ ಶಾಖೆಯಲ್ಲಿ ಪಡೆದ ಸಾಲವೊಂದಕ್ಕೆ ನೀಡಿದ ಚೆಕ್ ಅಮಾನ್ಯಗೊಂಡಿತ್ತು. ಈ ಬಗ್ಗೆ ಬ್ಯಾಂಕ್ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪೂರೈಸಿದ ಬಳಿಕ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ 9ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಡಾ. ಶಿಲ್ಪಾ ಬ್ಯಾಡಗಿ ಅವರು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 2.42 ಲಕ್ಷ ರೂ. ದಂಡ ಹಾಗೂ ಒಂದು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಬ್ಯಾಂಕಿನ ಪರವಾಗಿ ಮಂಗಳೂರಿನ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.

ಹೆಡ್ ಮಾಸ್ಟರ್ ಅವರ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪಿನಿಂದ ಸರ್ಕಾರಿ ನೌಕರಿಯಲ್ಲಿ ಇರುವ ಚಂದ್ರಶೇಖರ್ ನಾಯಕ್ ಅವರು ತಮ್ಮ ಸರ್ಕಾರಿ ನೌಕರಿ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಪ್ರಕರಣದ ವಿವರ:

ಮಂಗಳೂರಿನ ದಿವ್ಯಶ್ರೀ ಡಿ.ಕೆ. ಎಂಬವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕೊಡಿಯಾಲ್‌ಬೈಲ್ ಶಾಖೆಯಿಂದ ಸಾಲ ಪಡೆದಿದ್ದರು. ಈ ಸಾಲಕ್ಕೆ ಚಂದ್ರಶೇಖರ್ ಎಸ್. ನಾಯಕ್ ಜಾಮೀನುದಾರರಾಗಿದ್ದರು. ದಿವ್ಯಶ್ರೀ ಪಡೆದ ಸಾಲವನ್ನು ಸಕಾಲಕ್ಕೆ ತೀರಿಸದೆ ಸುಸ್ತಿಯಾಗಿತ್ತು. ಈ ಬಗ್ಗೆ ಸಾಲ ವಸೂಲಾತಿಗಾಗಿ ಸಹಕಾರಿ ಕಾಯ್ದೆಯನ್ವಯ ಬ್ಯಾಂಕ್ ಕಾನೂನು ಪ್ರಕ್ರಿಯೆಯನ್ನು ಜರುಗಿಸಲಾಗಿತ್ತು.

ಈ ಮಧ್ಯೆ, ಬ್ಯಾಂಕ್‌ನ್ನು ಸಂಪರ್ಕಿಸಿದ ಕಾವಳಕಟ್ಟೆ ಶಾಲೆಯ ಹೆಡ್ ಮಾಸ್ಟರ್ ಚಂದ್ರಶೇಖರ್ ನಾಯಕ್ ಸಾಲದ ಮರುಪಾವತಿಗಾಗಿ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಚಂದ್ರಶೇಖರ್ ನಾಯಕ್ ವಿರುದ್ಧ ಬ್ಯಾಂಕ್ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. ಬ್ಯಾಂಕಿನ ಪರವಾಗಿ 18 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಮೌಖಿಕ ಸಾಕ್ಷಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಗೆ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article