‘ರಾಜ್ಯ ಸರಕಾರ ಟಿಪ್ಪು ಜನ್ಮ ದಿನವನ್ನು ಆಚರಿಸಬೇಕು’: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

‘ರಾಜ್ಯ ಸರಕಾರ ಟಿಪ್ಪು ಜನ್ಮ ದಿನವನ್ನು ಆಚರಿಸಬೇಕು’: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

ಮಂಗಳೂರು: ದೇಶ ಪ್ರೇಮಿ, ಸರ್ವಧರ್ಮ ಸಹಿಷ್ಣು, ನಾಡಿನ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಟಿಪ್ಪು ಸುಲ್ತಾನ್ ಜನ್ಮದಿನವನ್ನು ನ.10ರಂದು ರಾಜ್ಯ ಸರಕಾರ ಅದ್ದೂರಿಯಾಗಿ ಆಚರಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಅಬ್ದುಲ್ ರಹಿಮಾನ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳಲ್ಲಿ ಟಿಪ್ಪುಸುಲ್ತಾನ್ ಚರಿತ್ರೆಯ ಅಳವಡಿಸಬೇಕು. ರಾಜ್ಯದ ಪ್ರಮುಖ ಸಾಧಕರಿಗೆ ಸುಲ್ತಾನ್ ನಾಮಾಂಕಿತ ಪ್ರಶಸ್ತಿ ಘೋಷಿಸಬೇಕು. ಟಿಪ್ಪುಸುಲ್ತಾನ್ ಹೆಸರು ಶಾಶ್ವತವಾಗಿ ಉಳಿಯುವಂತಹ ಕಾರ್ಯಕ್ರಮ ಆಯೋಜಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಸರಕಾರ ಇದನ್ನು ನಿರ್ಲಕ್ಷಿಸಿದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರದು ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವವರು ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ ಕನಕದಾಸ, ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್, ಬಸವಣ್ಣ ಅವರ ಹೆಸರು ನಾಮಕರಣ ಮಾಡಲು ಆದೇಶಿಸಿದ್ದಾರೆ. ಆದರೆ, ಅಹಿಂದ ಮತ್ತು ನ್ಯಾಯಾದ ಪರ ಎನ್ನುವ ಸಿದ್ದರಾಮಯ್ಯ ಅವರು ಸುಲ್ತಾನರ ಪರ ಯಾಕಿಲ್ಲ ಎಂದು ಪ್ರಶ್ನಿಸಿದರು.

ಸರಕಾರ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಸ್ಪೀಕರ್ ಯು.ಟಿ.ಖಾದರ್, ಸಚಿವ ಝಮೀರ್ ಅಹ್ಮದ್ ಖಾನ್ ಮತ್ತಿತರ ಸಚಿವರು, ಶಾಸಕರು ರಾಜೀನಾಮೆ ನೀಡಿ ಟಿಪ್ಪುಪರ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಪಕ್ಷದ ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ, ಸದಸ್ಯರಾದ ಕೆ.ಎಸ್.ಅಬ್ದುಲ್ ಖಾದರ್, ಅಬ್ದುಲ್ ರಹ್ಮಾನ್ ಕಂದಕ್, ಮುಹಮ್ಮದ್ ಬಿ.ಎ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article