ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಮತ್ತು ಮಾನವಿಕ ಸಂಘಗಳ ಆಶ್ರಯದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.
ಮಂಗಳೂರಿನ ನ್ಯಾಯವಾದಿ ಪರಿಮಳ ರಾವ್ ಎಂ. ಅವರು ಮುಖ್ಯಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು, ವಿದ್ಯಾರ್ಥಿಗಳು ಸಂವಿಧಾನಿಕ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಅರಿತುಕೊಂಡು ಪಾಲಿಸುವಂತೆ ಹೇಳಿದರು.
ಬಿ.ಸಿ.ಎ. ವಿದ್ಯಾರ್ಥಿನಿ ವೈಷ್ಣವಿ, ತುಳು ಭಾಷೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಭಾಷಾಂತರಿಸಿದ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ನಸೀಮಾ ಬೇಗಂ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರತೀಕ್ಷಾ ಸ್ವಾಗತಿಸಿ, ಕ್ಷಮಾ ವಂದಿಸಿದರು. ಲಕ್ಷ್ಮೀಪ್ರಿಯ, ಪ್ರತೀಕ್ಷಾ, ವಿದ್ಯಾಶ್ರೀ, ಕಾರ್ತಿಕ ಪ್ರಾರ್ಥಿಸಿದರು. ಮುಹಮ್ಮದ್ ಆಶಿಕ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ನ ಸಂಯೋಜಕಿ ವತ್ಸಲ ಪಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ಸಂವಿಧಾನದ ಅರಿವಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಾಗೂ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎನ್ನುವ ಶೀರ್ಷಿಕೆಯಡಿ ವರ್ಣಚಿತ್ರ ಮತ್ತು ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು. ಸಂವಿಧಾನ ದಿನದ ಭಾಗವಾಗಿ ಸಾಂವಿಧಾನಿಕ ಕರ್ತವ್ಯಗಳ ಅರಿವು ಮೂಡಿಸುವ ಫಲಕವನ್ನು ಅನಾವರಣಗೊಳಿಸಲಾಯಿತು.
