‘ನಿರಂಜನ-100ರ ನೆನಪು’ ವಿಶೇಷ ಉಪನ್ಯಾಸ
ವಿಶೇಷ ಉಪನ್ಯಾಸ ನೀಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಅವರು ‘ನಿರಂಜನ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಕ್ರಾಂತಿಕಾರಿ ಬರಹಗಾರ ಕುಳ್ಕುಂದ ಶಿವರಾಯರ ಬದುಕಿನ ಚಿತ್ರಣವನ್ನು ವಿದ್ಯಾರ್ಥಿಗಳ ಮುಂದೆ ಸವಿಸ್ತಾರವಾಗಿ ತೆರೆದಿಟ್ಟರು. ನಿರಂಜನರ ಬಾಲ್ಯದ ಬಗ್ಗೆ, ಬಾಲ್ಯದಲ್ಲಿ ಅವರು ಅನುಭವಿಸಿದ ಸವಾಲುಗಳು, ಮುಂದೆ ಜೀವನದಲ್ಲಿ ಬಂದ ಸವಾಲುಗಳನ್ನು ಅವರು ಮೆಟ್ಟಿ ನಿಂತ ಬಗೆಯನ್ನು ವಿವರಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕ್ರಾಂತಿಕಾರಿ ಬರಹಗಳ ಮೂಲಕ ನಿರಂಜನರು ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಪಕ್ಷಪಾತವಾಗಿ ಸಂಪೂರ್ಣವಾಗಿ ಎಡ ಭಾಗದ ಸ್ವಾಧೀನ ಕಳೆದುಕೊಂಡಿದ್ದರರೂ ನಿರಂಜನರು ಅದೆಷ್ಟೋ ಪುಸ್ತಕಗಳನ್ನು ಬರೆದದ್ದು ಅವರ ಛಲ ಹಾಗೂ ಜೀವನೋತ್ಸಾಹಕ್ಕೆ ನಿದರ್ಶನ. ಹಾಗೆಯೇ ಇಂತಹ ಸಂದರ್ಭದಲ್ಲಿಯೂ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅವರ ಉನ್ನತ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ ಎಂಬುದಾಗಿ ಡಾ. ಚಂದ್ರಗಿರಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೋಂತೆರೋ ವಿದ್ಯಾರ್ಥಿಗಳನ್ನುದ್ದೇಶಿಸಿ, ‘ಸಾಹಿತ್ಯ ಎಂಬುದು ಮಾನಸಿಕವಾಗಿ ಕುಗ್ಗಿರುವ ಮನುಷ್ಯನ ಮನಸ್ಸನ್ನು ಸ್ಥಿಮಿತಕ್ಕೆ ತರುವಲ್ಲಿ ಸಹಕಾರಿಯಾಗುವ ಒಂದು ಸಾಧನ. ಭಾವನಾತ್ಮಕ ಬೆಳವಣಿಗೆ ಎಂಬುದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಜನತೆಯಲ್ಲಿ ಇರಬೇಕಾದ ಪ್ರಮುಖ ಅಂಶ. ಭಾವನಾತ್ಮಕ ಬೆಳವಣಿಗೆಗೆ ಬರವಣಿಗೆ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು, ಪುಸ್ತಕಗಳನ್ನು ಓದುವುದು ಬಹಳ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶಪಾಲರು, ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ. ವಿಜಯಕುಮಾರ್ ಎಂ., ಪರೀಕ್ಷಾಂಗ ಕುಲ ಸಚಿವ ಡಾ. ವಿನಯಚಂದ್ರ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ರಾಧಾಕೃಷ್ಣ ಗೌಡ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಾಸುದೇವ ಎನ್. ಹಾಗೂ ಕನ್ನಡ ವಿಭಾಗದ ಉಪನ್ಯಾಸಕರಾದ ಪ್ರಶಾಂತಿ ಮತ್ತು ಪ್ರತಿಭಾ ಶೆಟ್ಟಿ ಉಪಸ್ಥಿತರಿದ್ದರು.
ಬಿಎಸ್ಸಿ ವಿದ್ಯಾರ್ಥಿನಿಯರಾದ ಮಾನಸ ಮತ್ತು ಅಪರ್ಣ ಪ್ರಾರ್ಥಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಸ್ವಾಗತಿಸಿ, ಶಿಬ್ಲಾ ವಂದಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ವಿಂಧ್ಯಾಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು.
