ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ವಾರ್ಷಿಕೋತ್ಸವ
Friday, November 7, 2025
ಮಂಗಳೂರು: ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯ ಹಿರಿಯ ಪ್ರಾಥಮಿಕ ಹಾಗೂ ಶಕ್ತಿ ಪ್ರೌಢ ಶಾಲಾ ವಿಭಾಗದ ವಾರ್ಷಿಕೋತ್ಸವವು ನ.6 ರಂದು ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಭಾಹಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣ ಅಂದರೆ ಕೇವಲ ಪಠ್ಯಪುಸ್ತಕದ ವಿಷಯದ ಕುರಿತು ಪರೀಕ್ಷೆ ಬರೆದು ರ‍್ಯಾಂಕ್ ಗಳಿಸುವುದು ಮಾತ್ರವಲ್ಲ, ಸಂಸ್ಕಾರದ ಶಿಕ್ಷಣ ಇಂದು ಸಮಾಜಕ್ಕೆ ಬಹಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಒಂದು ಮಗುವಿನ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಇಂದು ಶಕ್ತಿ ಶಾಲೆಯು ದಾರಿದೀಪವಾಗಿದೆ. ಇಲ್ಲಿನ ಮಕ್ಕಳ ಸಂಸ್ಕಾರವನ್ನು ನೋಡುವಾಗಲೇ ಅದು ಗೋಚರಿಸುತ್ತದೆ. ಇಲ್ಲಿ ಕಲಿಯುತ್ತಿರುವ ಪ್ರತಿಯೊಂದು ಮಗುವೂ ಸಮಾಜದ ಆಸ್ತಿಯಾಗಬೇಕು. ಸಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಈ ಶಕ್ತಿ ಶಾಲೆಯಂತಹ ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ.ಸಿ. ನಾಕ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಶಕ್ತಿ ಮೀರಿ ಶ್ರಮಿಸಲು ನಾವು ಸದಾ ಸಿದ್ಧರಿದ್ದೇವೆ, ಅದಕ್ಕೆ ಪೋಷಕರಾದ ನಿಮ್ಮ ಸಹಕಾರ ನಮಗೆ ತುಂಬಾ ಅಮೂಲ್ಯವಾದದ್ದು ಎಂದು ಹೇಳುತ್ತಾ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಎಲ್ಲಾ ಗಣ್ಯರು ಸೇರಿ ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
‘ವೆನ್ ಬುಕ್ಸ್ ಕಮ್ ಅಲೈವ್’ ಅಂದರೆ ‘ಪುಸ್ತಕಗಳು ಜೀವಂತವಾಗುವಾಗ’ ಎಂಬ ವಿಶಿಷ್ಟವಾದ ಥೀಮ್ ಅನ್ನು ಹೊಂದಿದ್ದ ಈ ವಾರ್ಷಿಕೋತ್ಸವದ ಉದ್ಘಾಟನೆಯು ವಿಭಿನ್ನವಾಗಿದ್ದು ಮುಖ್ಯ ಅತಿಥಿಗಳು ಪುಸ್ತಕವನ್ನು ತೆರೆಯುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರೆ ಆ ಪುಸ್ತಕದಿಂದ ಅದೆಷ್ಟೋ ಕಥೆಗಳ ಪಾತ್ರಗಳು ಹೊರಬಂದಿರುವುದು ನೋಡುಗರ ಗಮನಸೆಳೆಯುವಂತಿತ್ತು.
ಬಳಿಕ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅವರು 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು.
ಶಕ್ತಿ ವಿದ್ಯಾ ಸಂಸ್ಥೆಯ ಟ್ರಸ್ಟಿಯಾಗಿರುವ ಸಗುಣ ಸಿ. ನಾಯ್ಕ್, ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತಿರಿದ್ದರು.
ಶಕ್ತಿ ವಸತಿ ಶಾಲೆಯ ಶಿಕ್ಷಕಿ ಚೇತನಾ ತಲಪಾಡಿ ಸ್ವಾಗತಿಸಿದರು. ಶಿಕ್ಷಕಿ ಸ್ಮಿತಾ ವಿನಿಲ್ ವಂದಿಸಿ, ಶಕ್ತಿ ವಸತಿ ಶಾಲೆಯ ಶಿಕ್ಷಕಿ ಅರುಣೀತ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಕ್ತಿ ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಕಣ್ಮನ ಸೆಳೆಯುವಂತಿತ್ತು.








