ರಥಬೀದಿ ಕಾಲೇಜಿನಲ್ಲಿ 'ವ್ಯಕ್ಯಿತ್ವ ವಿಕಸನ ಕಾರ್ಯಗಾರ'
Thursday, November 6, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ವತಿಯಿಂದ 2025-26ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳಿಗೆ 'ವ್ಯಕ್ತಿತ್ವ ವಿಕಸನ ಕಾರ್ಯಗಾರ' ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆಯಿತು.
ಕಾರ್ಯಗಾರವನ್ನು ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರೊ. ಮೇಜರ್ ರಾಧಾಕೃಷ್ಣ ಅವರು ಉದ್ಘಾಟಿಸಿ ಮಾತನಾಡಿ, ಭಾಷೆ 30% ಮಾತನಾಡಿದರೆ, ದೇಹ 70% ಮಾತನಾಡುತ್ತದೆ. ನಮ್ಮ ದೇಹಭಾಷೆ ನಮ್ಮನ್ನು ಹೆಚ್ಚಾಗಿ ಪರಿಚಯಿಸುತ್ತದೆ. ನಾವು ಇನ್ನೊಬ್ಬರೊಂದಿಗೆ ಮಾತನಾಡುವಾಗ ನಮ್ಮ ದೇಹದ ಭಾಷೆ ಬಹಳ ಮುಖ್ಯವಾಗಿರುತ್ತದೆ ಎಂದ ಅವರು ಒಬ್ಬ ನಾಯಕನಾದವನು ಪ್ರಶ್ನೆ ಕೇಳಲು ಗೊತ್ತಿದ್ದರೆ ಆತನ ವ್ಯಕ್ತಿತ್ವ ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಹೇಳಿದರು.
ಮೇಜರ್ ಅವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ದೈಹಿಕ ಚಟುವಟಿಕೆಗಳೊಂದಿಗೆ ನಮ್ಮ ಜೀವನವನ್ನು ಹೇಗೆ ಉಲ್ಲಾಸಮಯವಾಗಿ ಇಟ್ಟುಕೊಳಬೇಕು ಎಂಬುವುದನ್ನು ತಿಳಿಸಿಕೊಟ್ಟರು.
ಪುಸ್ತಕದ ವಿದ್ಯೆ ಸಾಕಾಗುವುದಿಲ್ಲ. ಪುಸ್ತಕದ ವಿದ್ಯೆಯನ್ನು ಮೀರಿ ಕಲಿಯಬೇಕು. ಪ್ರತಿನಿತ್ಯ ದಿನಪತ್ರಿಕೆ, ಮ್ಯಾಗಜೀನ್ ಗಳನ್ನು ಓದುವ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಗಾರದ ಬಳಿಕ ಸಂಪನ್ಮೂಲ ವ್ಯಕ್ತಿಯೊಂದಿಗೆ ವಿದ್ಯಾರ್ಥಿ ಪ್ರತಿನಿಧಿಗಳು ಸಂವಾದ ನಡೆಸಿ, ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಅವರು ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ಅತಿಥಿಗಳನ್ನು ಪರಿಚಯಿಸಿದರು. ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ವಿಜ್ಞಾನ ವಿಭಾಗಗಳ ಸಂಯೋಜಕಿ ಪ್ರೊ. ವಸಂತಿ ಪಿ., ಸಾಂಸ್ಕೃತಿಕ ವೇದಿಕೆಯ ಸಂಯೋಜಕಿ ಡಾ. ಕೃಷ್ಣಪ್ರಭ, ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.




