ನೀರಿನ ಕೊಳವೆ ಒಡೆದು ಹಾನಿ-ಶಾಸಕರುಗಳು ಸ್ಥಳಕ್ಕೆ ಭೇಟಿ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು

ನೀರಿನ ಕೊಳವೆ ಒಡೆದು ಹಾನಿ-ಶಾಸಕರುಗಳು ಸ್ಥಳಕ್ಕೆ ಭೇಟಿ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು


ಮಂಗಳೂರು: ನಗರ ಭಾಗಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಕೊಳವೆ ಒಡೆದು ಹೋಗಿ ಮೂರ್ನಾಲ್ಕು ದಿನಗಳು ಕಳೆದಿದ್ದು ಇನ್ನೂ ಸಹ ದುರಸ್ತಿ ಕಾರ್ಯ ಪೂರ್ಣಗೊಳ್ಳದ ಬಗ್ಗೆ ಶಾಸಕರುಗಳಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಅವರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಅಂತ್ಯಗೊಂಡು ಒಂದು ವರ್ಷವಾಗುತ್ತಾ ಬಂದಿದ್ದು ಸದ್ಯ ಯಾವುದೇ ಚುನಾಯಿತ ಪ್ರತಿನಿಧಿಗಳಿಲ್ಲದ್ದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರವೇ ಆಡಳಿತಾಧಿಕಾರಿ ಮೂಲಕ ಆಡಳಿತ ನಡೆಸುತ್ತಿದೆ. ಹೀಗಿರುವಾಗ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಉಂಟಾದರೂ ಅದಕ್ಕೆ ತಕ್ಷಣ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಒಂದು ದಿನದೊಳಗೆ ದುರಸ್ತಿಗೊಳಿಸಬಹುದಾದ ಕಾರ್ಯವು ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಮೂರು ದಿನ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ನಗರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ನೀರಿಲ್ಲದೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ ಎಂದರು.

ಕೊನೆಪಕ್ಷ ಟ್ಯಾಂಕರ್ ಮೂಲಕವೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿರುವುದು ಪಾಲಿಕೆಯ ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಲೋಡ್ ಶೆಡ್ಡಿಂಗ್ ನಿಂದಾಗಿ ನೀರಿನ ಒತ್ತಡ ಕಡಿಮೆಯಾಗುವ ಕಾರಣ ಹಲವು ಮನೆಗಳಿಗೆ ನೀರು ತಲುಪುತ್ತಿಲ್ಲ. ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಸಮಸ್ಯೆಗಳಿಗೆ ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಶೀಘ್ರ ಸ್ಪಂದನೆ ಸಿಗುತ್ತಿತ್ತು. ಈಗ ಇಲ್ಲಿನ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಇದೀಗ ನಾವೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿದ್ದು 19 ನೇ ತಾರೀಕು ಬುಧವಾರ ರಾತ್ರಿಯೊಳಗೆ ಎಲ್ಲ ದುರಸ್ತಿ ಕಾರ್ಯ ಸಂಪೂರ್ಣಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article