ತಾಕೊಡೆ ಹಾಲು ಉತ್ಪಾದಕರ ಸ. ಸಂಘದಿಂದ ದಲಿತ ಮಹಿಳೆಗೆ ಅನ್ಯಾಯ: ಚುನಾವಣೆ ಬಹಿಷ್ಕರಿಸಿ ಪ್ರತಿಭಟಿಸಿದ ನಿದೇ೯ಶಕರು
Wednesday, November 19, 2025
ಮೂಡುಬಿದಿರೆ: ಚುನಾವಣೆಯಲ್ಲಿ ಮತ ಹಾಕಲು ಅಹ೯ರಾಗಿದ್ದ ದಲಿತ ಮಹಿಳೆಯೋವ೯ರನ್ನು ತಾಕೊಡೆ ಹಾಲು ಉತ್ಪಾದಕರ ಸಹಕಾರಿ ಸಂಘವು ಅನಹ೯ಗೊಳಿಸಿ ಅನ್ಯಾಯವೆಸಗಿದೆ ಎಂದು ಆರೋಪಿಸಿ ಬುಧವಾರ ನಡೆಯಬೇಕಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಕೆಲವು ನಿದೇ೯ಶಕರು ಮತ್ತು ಸದಸ್ಯರು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ತಾಕೊಡೆಯಲ್ಲಿ ನಡೆದಿದೆ.
ಸೊಸೈಟಿಯ ಆಡಳಿತ ಮಂಡಳಿಯಲ್ಲಿ ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 7 ಸ್ಥಾನಗಳ ಬಹುಮತ ಅಗತ್ಯವಿತ್ತು. ಆದರೆ ಚುನಾವಣೆಯಲ್ಲಿ ಕೇವಲ 6 ಮಂದಿ ನಿರ್ದೇಶಕರು ಮಾತ್ರ ಭಾಗವಹಿಸಿದ್ದರಿಂದ, ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಚುನಾವಣೆಯನ್ನು ಒಂದು ವಾರ ಕಾಲ ಮುಂದೂಡಲಾಗಿದೆ.
ಗೈರು ಹಾಜರಾದ ನಿರ್ದೇಶಕರು ತಮ್ಮ ಸದಸ್ಯೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಹಕಾರಿ ಸಂಘದ ಸದಸ್ಯ ಜಾಯ್ಲಸ್ ತಾಕೋಡೆ ಮಾತನಾಡಿ ಈ ಹಿಂದೆ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಸಂಗ್ರಹಿಸುತ್ತಿದ್ದ ಸೊಸೈಟಿ ತಾಕೊಡೆಯದ್ದಾಗಿತ್ತು. ಕಳೆದ 10 ದಿನಗಳ ಹಿಂದೆ ಸೊಸೈಟಿಯಲ್ಲಿ ನಡೆದ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ. ಇಂತಹ ಅವ್ಯವಹಾರಗಳಿಂದಲೇ ಸೊಸೈಟಿಯು ಅಧಃಪತನದತ್ತ ಸಾಗಿದೆ.
ಪ್ರತಿಭಟನಕಾರರು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಚುನಾವಣಾ ಗೊಂದಲ ಮತ್ತು ಅವ್ಯವಹಾರಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಿರ್ದೇಶಕ ಯಶವಂತ್ ಶೆಟ್ಟಿ ಮಾತನಾಡಿ, ಅರ್ಹತೆ ಹೊಂದಿದ್ದರೂ ಸದಸ್ಯೆ ಪುಷ್ಪಾ ಅವರಿಗೆ ಸ್ಪರ್ಧಿಸುವ ಹಾಗೂ ಮತ ಚಲಾಯಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಸದಸ್ಯರೊಬ್ಬರು ಮತ ಚಲಾಯಿಸಿದ್ದಾರೆ. ನಿಯಮಾನುಸಾರ ಅರ್ಹತೆ ಇದ್ದರೂ, ಪರಿಶಿಷ್ಟ ಜಾತಿಯ ಮಹಿಳೆಗೆ ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿರುವುದು ಸಂಚು. ಸಂಬಂಧಪಟ್ಟವರು ಇದರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು.ಈ ಸೊಸೈಟಿಯಲ್ಲಿ ಕಳೆದ 15ಕ್ಕೂ ಅಧಿಕ ವರ್ಷಗಳಿಂದ ಚುನಾವಣೆ ನಡೆದಿಲ್ಲ. ಇಲ್ಲಿನ ಕಾರ್ಯದರ್ಶಿಗಳು ಆಡಳಿತ ಮಂಡಳಿಯನ್ನು ತಮ್ಮ ಕೈಗೊಂಬೆ ಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.



