ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದುಪಡಿಸಿದ ಹೈಕೋರ್ಟ್
Monday, November 17, 2025
ಮಂಗಳೂರು: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆಪ್ಟಂಬರ್ 18ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿತು.
ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಪೀಠ, ಮಹೇಶ್ ಶೆಟ್ಟಿ ತಿಮರೋಡಿಯವರ ಗಡಿಪಾರು ಆದೇಶ ರದ್ದುಪಡಿಸಿದೆ. ಇದೇ ವೇಳೆ, ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವಂತೆ ಎರಡನೇ ಪ್ರತಿವಾದಿಯಾದ ಪುತ್ತೂರು ಸಹಾಯಕ ಆಯುಕ್ತರಿಗೆ ನ್ಯಾಯಪೀಠ ನಿರ್ದೇಶಿಸಿದೆ.