ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಮಹಿಳಾ ಸಮಾವೇಶ: 30 ಮಂದಿಗೆ ಹೊಲಿಗೆ ಯಂತ್ರಗಳ ವಿತರಣೆ
ಇಲ್ಲಿನ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ರಜತ ಸಂಭ್ರಮದಂಗವಾಗಿ ಇಲ್ಲಿನ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಭಾನುವಾರ ನಡೆದ ಅವಿಭಜಿತ ದ.ಕ ಜಿಲ್ಲಾ ಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶದಲ್ಲಿ ಆಶೀವ೯ಚನ ನೀಡಿದರು.
ಐಎಎಸ್, ಕೆಎಎಸ್ ತರಬೇತುದಾರೆ, ರಾಜ್ಯ ಶಿಕ್ಷಾ ಫೌಂಡೇಶನ್‌ನ ನಿರ್ದೇಶಕಿ ಅನಿತಾಲಕ್ಷ್ಮೀ ಆಚಾರ್ಯ ಅವರು ದಿಕ್ಸೂಚಿ ಭಾಷಣ ಮಾಡಿ, ವಿಶ್ವಕರ್ಮರು ಕೆತ್ತಿದ ಶಿಲ್ಪಕಲೆಗಳಿಗೆ ಬೆಲೆಕಟ್ಟಲಾಗದು. ಆದರೆ ಅದನ್ನು ರಚಿಸಿದ ವ್ಯಕ್ತಿಗಳು ಮಾತ್ರ ಬೆಲೆಯಿಲ್ಲದ ಸ್ಥಿತಿಯಲ್ಲಿದ್ದಾರೆ. ಕಲೆಯನ್ನು ಅರಳಿಸುವವರನ್ನು ಕೂಲಿಕಾರ್ಮಿಕರನ್ನಾಗಿ ನೋಡುವ ಮನಸ್ಥಿತಿ ಸಮಾಜದಲ್ಲಿ ಬೇರೂರಿದೆ. ಇದನ್ನು ಹೋಗಲಾಡಿಸಬೇಕಾದರೆ ಆಧುನಿಕ ಶಿಕ್ಷಣ ಪಡೆದವರು ಪಂಚಕಸುಬುಗಳನ್ನು ಅವಲಂಬಿಸಿ ತಮ್ಮಲ್ಲಿರುವ ಕೌಶಲ್ಯ, ತಾಂತ್ರಿಕತೆಗೆ ಉದ್ಯಮದ ಸ್ವರೂಪವನ್ನು ನೀಡಬೇಕು ಎಂದು ಹೇಳಿದರು.
ಆಶೀರ್ವಚನ ನೀಡಿ, ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಧರ್ಮ, ಸಂಸ್ಕೃತಿಯ ಶಿಕ್ಷಣ ನೀಡುವ ಮೂಲಕ ಸತ್ತ್ರಜೆಗಳಾಗಿ ರೂಪಿಸಬೇಕು ಎಂದರು.
ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಹೊಲಿಗೆ ಯಂತ್ರಗಳ ವಿತರಣೆ:
ರಜತ ಸಂಭ್ರಮದಂಗವಾಗಿ ಅರ್ಹ 30 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಕೆ. ಬಾಲಕೃಷ್ಣ ಆಚಾರ್ಯ, ಮಾಜಿ ಆಡಳಿತ ಮೊಕ್ತೇಸರರಾದ ಡಾ. ಜಿ. ರಾಮಕೃಷ್ಣ ಆಚಾರ್ಯ, ಸುಂದರ ಆಚಾರ್ಯ, ಜಯಕರ ಆಚಾರ್ಯ, ಆನೆಗುಂದಿ ಸಂಸ್ಥಾನ ಮಾತೃಮಂಡಳಿಯ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ರೂವಾರಿ ಡಿಜಿಟಲ್ ಪತ್ರಿಕೆಯ ಸಂಪಾದಕಿ ರತ್ನಾವತಿ ಜೆ. ಬೈಕಾಡಿ ಹಾಗೂ ಕಾಳಿಕಾಂಬಾ ದೇವಾಲಯಗಳ ಅಧೀನದಲ್ಲಿರುವ 14 ಮಹಿಳಾ ಮಂಡಳಿಗಳ ಅಧ್ಯಕ್ಷರುಗಳು ಭಾಗವಹಿಸಿದರು.
ವಿಶ್ವಕರ್ಮ ಮಹಿಳೆಯರಿಗಾಗಿ ಏರ್ಪಡಿಸಿದ ಅವಿಭಜಿತ ದ.ಕ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಸಮಿತಿಯ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ವಿಶೇಷ ದಾನಿಗಳಾದ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿ.ನ ಆಡಳಿತ ನಿರ್ದೇಶಕ ಡಾ. ಜಿ ರಾಮಕೃಷ್ಣ ಆಚಾರ್ಯ ಹಾಗೂ ಎಡಪದವು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಆಚಾರ್ಯ ಅವರನ್ನು ಗೌರವಿಸಲಾಯಿತು.
ಕ್ಷೇತ್ರದ ಮೊಕ್ತೇಸರರಾದ ಶಿವರಾಮ ಆಚಾರ್ಯ, ಯೋಗೀಶ್ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಧ್ಯಾ ಜಯಕರ ಆಚಾರ್ಯ ವಂದಿಸಿದರು. ಭಕ್ತಿಶ್ರೀ ಆಚಾರ್ಯ, ರಶ್ಮಿತಾ ಅರವಿಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮತ್ತಿತರ ಗಣ್ಯರು ಭಾಗವಹಿಸಿದ್ದರು.