ರಾಣಿ ಅಬ್ಬಕ್ಕಳ ಯಶೋಗಾಥೆ ತುಳುನಾಡಿಗೆ ಹೆಮ್ಮೆ: ಚಾರುಕೀರ್ತಿ ಸ್ವಾಮೀಜಿ

ರಾಣಿ ಅಬ್ಬಕ್ಕಳ ಯಶೋಗಾಥೆ ತುಳುನಾಡಿಗೆ ಹೆಮ್ಮೆ: ಚಾರುಕೀರ್ತಿ ಸ್ವಾಮೀಜಿ


ಮೂಡುಬಿದಿರೆ: ಇತಿಹಾಸ ಅಳಿದು ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಾಣಿ ಅಬ್ಬಕ್ಕಳ ಮನೆತನ ಮತ್ತು ಚೌಟರ ಅರಮನೆ ಯುವ ಪೀಳಿಗೆಯ ಮುಂದಿರುವುದು ದೊಡ್ಡ ವಿಷಯ.  ತುಳುನಾಡಿನ ಸ್ವಾಭಿಮಾನದ ಪ್ರತೀಕವಾಗಿರುವ ವೀರ ರಾಣಿ ಅಬ್ಬಕ್ಕಳ ಯಶೋಗಾಥೆ ತುಳುನಾಡಿಗೆ ಹೆಮ್ಮೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು. 

ವೀರರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ಶ್ರೀ ಧವಲತ್ರಯ ಜೈನ ಕಾಶಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಮೂಡುಬಿದಿರೆ ಮಹಾವೀರ ಭವನದಲ್ಲಿ ನಡೆಸಿದ `ಅಬ್ಬಕ್ಕ-500 ಪ್ರೇರಣಾದಾಯಿ ಉಪನ್ಯಾಸ ಸರಣಿ'ಯ 97ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.

ಉಳ್ಳಾಲದ ರಾಣಿ ಅಬ್ಬಕ್ಕಳ ಶೌರ್ಯಗಾಥೆಯನ್ನು ಮುಂದಿನ ಸಮಾಜಕ್ಕೆ ತಿಳಿಹೇಳುವ ಉದ್ದೇಶದಿಂದ, ಆಕೆಯ 500ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯಾದ್ಯಂತ 500 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಟ್ಟು ನೂರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದುವರೆಗೆ 96 ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಎಂದರು. 

ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಕಂಬಳ ನಡೆಯುವ ಒಂಟಿಕಟ್ಟೆ ಪ್ರದೇಶಕ್ಕೆ ಹಿಂದಿನಿಂದಲೂ 'ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ' ಎಂಬ ಹೆಸರಿತ್ತು. ಜವನೆರ್ ಬೆದ್ರ ಸಂಘಟನೆಯ ಮನವಿ ಮೇರೆಗೆ ರಾಣಿ ಅಬ್ಬಕ್ಕಳ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಚೌಟರ ಅರಮನೆಯ ಎದುರು ಭವ್ಯ ಪ್ರತಿಮೆ ಲೋಕಾರ್ಪಣೆಗೊಂಡಿರುವುದು ಮೂಡುಬಿದಿರೆಗೆ ಹೆಮ್ಮೆ ತಂದಿದೆ ಎಂದರು.

ಅಬ್ಬಕ್ಕ ವಂಶಸ್ಥೆ, ಚೌಟರ ಅರಮನೆಯ ಹಿರಿಯ ಸದಸ್ಯೆ ಕೇಸರಿ ರತ್ನ ರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. 

ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕರಾಂ ಪೂಜಾರಿ ಉಪನ್ಯಾಸ ನೀಡಿದರು. 

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಡಿ.ಜೆ. ವಿದ್ಯಾವರ್ಧಕ ಸಂಘದ ಸಂಚಾಲಕ ಹೇಮರಾಜ್ ಬೆಳ್ಳಿ ಬೀಡು, ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ, ರಾಣಿ ಅಬ್ಬಕ್ಕ @500 ಸರಣಿಯ ಸಂಯೋಜಕ ಶರಣ್ ಕುಮಾರ್ ಶೆಟ್ಟಿ, ಕೆ.ಆರ್.ಎಂ.ಎ.ಎಸ್.ಎಸ್. ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕಿ ಮಲ್ಲಿಕಾ ಅವರು ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಯನ್ನು ಕಾಜಲ್ ಪರಿಚಯಿಸಿದರು ಮತ್ತು ಸೌಮ್ಯಶ್ರೀ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article