ಬಹುಮುಖ ಪ್ರತಿಭೆ ಅಭಿಷ್ ಪೂಜಾರಿಗೆ "ಕಲಾರತ್ನ" ಪ್ರಶಸ್ತಿ
Monday, November 17, 2025
ಮೂಡುಬಿದಿರೆ: ಮಾರ್ನಾಡಿನ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಅಭಿಷ್ ಪೂಜಾರಿಗೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ 'ಕಲಾರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಂಡ್ರಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಭಿಷ್‌ಗೆ ಸಂಸ್ಥೆಯ ಮಂಗಳೂರು ಕಚೇರಿಯಲ್ಲಿ ನಡೆದ ವ್ಯಾಲ್ಯೂ ಅವಾರ್ಡ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿಗಳು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.
ಮಾರ್ನಾಡು ಬಂಗೇರದಡಿಯ ವಿಶ್ವನಾಥ ಪೂಜಾರಿ ಮತ್ತು ಸುಮಿತ್ರಾ ದಂಪತಿಯ ತೃತೀಯ ಪುತ್ರನಾಗಿರುವ ಅಭಿಷ್, ಈ ಹಿಂದೆ ಜನಪ್ರಿಯ ರಿಯಾಲಿಟಿ ಶೋ 'ಡ್ರಾಮಾ ಜೂನಿಯರ್' ಮೂಲಕ ಮನೆಮಾತಾಗಿದ್ದಾನೆ. ಅಲ್ಲದೆ, 'ಸೂ ಫ್ರಮ್ ಸೋ', 'ದಸ್ಕತ್' ಸಹಿತ ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾನೆ.
ಅಭಿಷ್ ನೃತ್ಯ, ಯಕ್ಷಗಾನ, ಸಂಗೀತ, ನಟನೆ ಮತ್ತು ಭಜನೆ ಸೇರಿದಂತೆ ಬಹುವಿಧದ ಕಲಾಪ್ರತಿಭೆಯನ್ನು ಹೊಂದಿದ್ದಾನೆ. ಪ್ರಶಸ್ತಿ ಸ್ವೀಕರಿಸಿದ ಈ ಸಾಧಕ ವಿದ್ಯಾರ್ಥಿಯನ್ನು ಶಾಲೆಯ ಎಸ್.ಡಿ.ಎಂ.ಸಿ., ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.