ಮೂಡುಬಿದಿರೆ ಕಾಳಿಕಾಂಬಾ ಮಹಿಳಾ ಸಮಿತಿ ರಜತ ಸಂಭ್ರಮ
Tuesday, November 4, 2025
ಮೂಡುಬಿದಿರೆ: ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ರಜತ ಸಂಭ್ರಮ ಕಾರ್ಯಕ್ರಮವು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಮಂಗಳವಾರ ಭಜನಾ ಸೇವೆಯೊಂದಿಗೆ ಪ್ರಾರಂಭಗೊಂಡಿತು. ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಹಾಗೂ ಎಸ್‌ಕೆಎಫ್ ಎಲಿಕ್ಸರ್ ಇಂಡಿಯ ಪ್ರೈ. ಲಿ.ನ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ಯ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ದೇವಾಲಯದ ಕಟ್ಟಡ ನಿರ್ಮಿಸುವುದು ಮುಖ್ಯವಲ್ಲ. ಅಲ್ಲಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು. ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವ ಕೇಂದ್ರವಾಗಬೇಕು. ಮಹಿಳಾ ಮಂಡಳಿಯು ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆಯನ್ನು ಕೈಗೊಂಡಾಗ ಸಮಾಜ ಆರ್ಥಿಕವಾಗಿ ಸಧೃಡವಾಗಿರಲು ಸಾಧ್ಯ ಎಂದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ ಶುಭ ಹಾರೈಸಿದರು. ಕ್ಷೇತ್ರದ ಮೊಕ್ತೇಸರ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ ಆಚಾರ್ಯ, ಕ್ಷೇತ್ರದ ಪ್ರಧಾನ ಅರ್ಚಕ ವಿಘ್ನೇಶ್ವರ ಪುರೋಹಿತ ಉಪಸ್ಥಿತರಿದ್ದರು.
ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷ ಶಾಂತಲಾ ಸೀತಾರಾಮ ಆಚಾರ್ಯ ಸ್ವಾಗತಿಸಿ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು, ಅವಿಭಜಿತ ದ.ಕ ಜಿಲ್ಲೆಯ 12 ಮಹಿಳಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.