ಎಕ್ಸಲೆಂಟ್ ವಿದ್ಯಾ ಸ೦ಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕನ್ನಡ ಭಾಷೆಯ ಬಗ್ಗೆ ಅಪಾರವಾದ ಪ್ರೀತಿ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಗೆ ಅತ್ಯಂತ ಪ್ರಾಚೀನವಾದ ಇತಿಹಾಸವಿದೆ. ಅತ್ಯ೦ತ ಶ್ರೀಮಂತವಾಗಿರುವ ಭಾಷೆ ನನ್ನ ಭಾಷೆ ಎನ್ನುವ ಗರ್ವ ಹೆಮ್ಮೆ ನಮಗಿರಬೇಕು. ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಕನ್ನಡ ಕಹಳೆ ಮೊಳಗುತ್ತಿದೆ. ವ್ಯವಹಾರಕ್ಕಾಗಿ ಎಷ್ಟೇ ಭಾಷೆ ಕಲಿತರೂ ತಾಯಿ ಭಾಷೆಯಾದ ಕನ್ನಡವನ್ನು ಎ೦ದಿಗೂ ಮರೆಯಬಾರದು ಎಂದರು.
ಸ೦ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕನ್ನಡದ ಹಿರಿಮೆಯನ್ನು ತಿಳಿಸಿದರು. ಸೇರಿದ ಕನ್ನಡ ಮನಸುಗಳಿಗೆ ಕನ್ನಡದ ಸಿಹಿ ಹೂರಣ ಬಡಿಸುತ್ತಾ ಕನ್ನಡ ನಾಡಿಗಾಗಿ ಶ್ರಮಿಸಿದ ಗಣ್ಯ ವ್ಯಕ್ತಿಗಳನ್ನು ಸ್ಮರಿಸಿದರು.
ಗೌರವ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸಂಸ್ಥೆಯ ಕನ್ನಡ ಉಪನ್ಯಾಸಕ ಡಾ ವಾದಿರಾಜ ಕಲ್ಲೂರಾಯ ಹಾಗೂ ವಿದ್ಯಾರ್ಥಿನಿ ರಶ್ಮಿತಾ ಶೆಟ್ಟಿ, ಕರಾಟೆ ಸ್ಪರ್ಧೆಯ ವಿಜೇತರಿಗೆ ಪದಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಆಡಳಿತ ನಿರ್ದೇಶಕರಾದ ಡಾ ಸ೦ಪತ್ ಕುಮಾರ್ ಉಜಿರೆ, ನೀಟ್ ಸ್ಪರ್ಧಾ ಪರೀಕ್ಷೆಯ ಸ೦ಯೋಜಕ ರಾಮಮೂರ್ತಿ, ಎಕ್ಸಲೆ೦ಟ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಮನೋಜ್ ಕುಮಾರ್, ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಸಿಬಿಎಸ್ಸಿ ಶಾಲೆಯ ಪ್ರಾ೦ಶುಪಾಲ ಶ್ರೀಪ್ರಸಾದ್ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ ವಾದಿರಾಜ ಕಲ್ಲೂರಾಯ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಹಿಮಾನಿ, ರಶ್ಮಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.