ಮೂಡುಬಿದಿರೆಯಲ್ಲಿ ಹಲವು ಸಮಸ್ಯೆಗಳ ಸರಮಾಲೆ:  ಪರಿಹಾರಕ್ಕೆ ಸಾವ೯ಜನಿಕರಿಂದ ಸಭೆ

ಮೂಡುಬಿದಿರೆಯಲ್ಲಿ ಹಲವು ಸಮಸ್ಯೆಗಳ ಸರಮಾಲೆ: ಪರಿಹಾರಕ್ಕೆ ಸಾವ೯ಜನಿಕರಿಂದ ಸಭೆ


ಮೂಡುಬಿದಿರೆ: ಇಲ್ಲಿನ ಪೇಟೆಯಲ್ಲಿ ನಾಗರಿಕರು ಹಲವಾರು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದು ಇದಕ್ಕೆ ತಾವು ತಮ್ಮಿಂದಾದಷ್ಟು ಮಟ್ಟಿಗೆ ಪರಿಹಾರವನ್ನು ಯಾವ ರೀತಿಯಾಗಿ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶನಿವಾರ ಸಂಜೆ ಸಮಾಜ ಮಂದಿರದಲ್ಲಿ  ಸಾರ್ವಜನಿಕ ಕುಂದು ಕೊರತೆ ಸಭೆಯು ನಡೆಯಿತು. 


ಜನಸಾಮಾನ್ಯರು, ಬಸ್ ಮಾಲಕರು, ಉದ್ಯಮಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು  ಈ ಸಭೆಯಲ್ಲಿ ಭಾಗವಹಿಸಿ ಮೂಡುಬಿದಿರೆ ಪೇಟೆಯಲ್ಲಿ ಆಗುತ್ತಿರುವ ಟ್ರಾಫಿಕ್, ಸ್ವಚ್ಛತೆ, ವಿದ್ಯಾಥಿ೯ಗಳ ತ್ರಿಬಲ್ ರೈಡ್,  ಸಾರ್ವಜನಿಕ ಮೂಲಸೌಕರ್ಯ ಮತ್ತು ಪೊಲೀಸ್ ವ್ಯವಸ್ಥೆ ಸಹಿತ ಒಟ್ಟು 30 ಸಮಸ್ಯೆಗಳ ಬಗ್ಗೆ ತೀವ್ರ ಚರ್ಚೆ ನಡೆದು ಹೋರಾಟಕ್ಕೆ "ನಮ್ಮ ಮೂಡುಬಿದಿರೆ ಫಾರಂ"ಸ್ಥಾಪಸಿ  ಆ ಮೂಲಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸುವುದೆಂದು ನಿರ್ಣಯಿಸಲಾಯಿತು. 


ತಹಶೀಲ್ದಾರ್ ಅವರು ಎಲ್ಲಾ ಜನಸಾಮಾನ್ಯರನ್ನು ಕರೆದು ಸಭೆ ನಡೆಸಿ ಮನವಿಗೆ ಸೂಕ್ತ ಉತ್ತರ ಮತ್ತು ಪರಿಹಾರ ಕ್ರಮಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಂಘಟಕ ಅಕ್ಷಯ್ ಜೈನ್ ಮಾತನಾಡಿ, ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು, ಸಂಬಂಧಪಟ್ಟವರಿಗೆ ಮನದಟ್ಟು ಮಾಡಲು, ಕಾನೂನು‌ ರೀತಿಯ ಹೋರಾಟಕ್ಕೆ ವೇದಿಕೆಯಾಗಿದೆ. ಮೂಡುಬಿದಿರೆಯ ನೈಜ್ಯ ಸಮಸ್ಯೆ, ಅದಕ್ಕೆ ಸೂಕ್ತ ಪರಿಹಾರ ಮಾತ್ರ ನಮ್ಮ ಉದ್ದೇಶ. ಯಾವುದೇ ವ್ಯಕ್ತಿ, ಸಂಸ್ಥೆಯನ್ನು ದೂರುವ ಅಥವಾ ಟಾರ್ಗೆಟ್ ಮಾಡುವ ಇರಾದೆ ನಮ್ಮಲಿಲ್ಲ. ನಮ್ಮ ಮೂಡುಬಿದಿರೆ ಫಾರಂ ರಾಜಕೀಯೇತರವಾಗಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಸಭೆಯಲ್ಲಿ ನಾಗರಿಕರು ಪಟ್ಟಿ ಮಾಡಿದ ಪ್ರಮುಖ ಮತ್ತು ಗಂಭೀರ ಸಮಸ್ಯೆಗಳು ಇಂತಿವೆ:

ಸಂಚಾರ ಮತ್ತು ಸಾರಿಗೆ ಸಮಸ್ಯೆಗಳು:

 * ಮೂಡುಬಿದಿರೆ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕೊರತೆ.

 * "ನೋ ಎಂಟ್ರಿ" ಫಲಕಗಳ ಸ್ಪಷ್ಟತೆ ಮತ್ತು ಅನುಷ್ಠಾನದ ಕೊರತೆ.

 * ಟ್ರಾಫಿಕ್ ಸಮಸ್ಯೆ ಮತ್ತು ರಿಂಗ್ ರೋಡ್ ವ್ಯವಸ್ಥೆ ಹಾಗೂ ಸೂಚನಾ ಫಲಕಗಳ ಸ್ಥಾಪನೆ.

 * ಸರ್ಕಾರಿ ಮತ್ತು ಮುಂಬೈ ಬಸ್‌ಗಳಿಗೆ ಸರಿಯಾದ ಬಸ್ ನಿಲುಗಡೆ ವ್ಯವಸ್ಥೆ ಬೇಕು.

 * ಘನ ವಾಹನಗಳು ಪೇಟೆ ಒಳಗಡೆ ಸಂಚಾರಿಸುವುದು.

 * ಕರ್ಕಶ ಹಾರ್ನ್‌ಗಳನ್ನು ನಿಷೇಧಿಸುವುದು.

 * ನಿಶ್ಮಿತಾ ಟವರ್ ಸರ್ಕಲ್‌ನಿಂದ ಹಳೆ ಪೊಲೀಸ್ ಸ್ಟೇಷನ್ ತನಕ ಘನ ವಾಹನಗಳ ಪ್ರವೇಶ ನಿಷೇಧವಿದ್ದರೂ ನಿಯಮ ಉಲ್ಲಂಘನೆ.

 * ಖಾಸಗಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಹೋಗದೆ, ಪ್ರಯಾಣಿಕರನ್ನು ರಸ್ತೆಯ ಮಧ್ಯೆ ಇಳಿಸಿ ಹೋಗುವುದು.

 * ಸಾರ್ವಜನಿಕರ ಅಡ್ಡಾದಿಡ್ಡಿ ಪಾರ್ಕಿಂಗ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

 * ಸಂಜೆ 6:30ರ ನಂತರ ಖಾಸಗಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಹೋಗದಿರುವುದು.

 * ಎಲ್ಲಾ ಶಾಲಾ-ಕಾಲೇಜು ಬಸ್‌ಗಳು ನಗರಕ್ಕೆ ಬರುವ ಬದಲು ರಿಂಗ್ ರೋಡ್ ಮೇಲೆ ಸಂಚರಿಸುವಂತೆ ನಿರ್ಬಂಧಿಸಬೇಕು.

ನಾಗರಿಕ ಸೌಲಭ್ಯ ಮತ್ತು ಆಡಳಿತ ಸುಧಾರಣೆ:

 * ಮಾರ್ಕೆಟ್ ಸಮಸ್ಯೆ ಮತ್ತು ಸ್ವಚ್ಛತೆಯ ಕೊರತೆ (ಜೈನ ಕಾಶಿ ಮತ್ತು ವಿದ್ಯಾಕಾಶಿಯಾಗಿದ್ದರೂ ಸ್ವಚ್ಛತೆಗೆ ಕ್ರಮವಿಲ್ಲ).

 * ಸಾರ್ವಜನಿಕ ಶೌಚಾಲಯಗಳ ಕೊರತೆ.

 * ಝೀಬ್ರಾ ಕ್ರಾಸಿಂಗ್, ರಸ್ತೆ ಎಚ್ಚರಿಕೆ ಮತ್ತು ಪಾರ್ಕಿಂಗ್ ಪೇಂಟಿಂಗ್‌ಗಳ ಕೊರತೆ.

 * ರಸ್ತೆ ಬದಿಯ ಅಂಗಡಿಗಳು ಖಾಯಂ ಆಗಿ ನೆಲೆಯೂರುತ್ತಿರುವುದು.

 * ಹೋಟೆಲ್, ಬೇಕರಿ, ಸ್ಟ್ರೀಟ್ ಫುಡ್ ಮತ್ತು ಸೂಪರ್ ಮಾರ್ಕೆಟ್‌ಗಳ ಮೇಲೆ ಗುಣಮಟ್ಟ ಪರಿಶೀಲನೆಗಾಗಿ ದಾಳಿ ನಡೆಸಬೇಕು.

 * ಮೂಡುಬಿದಿರೆ  ಹೆಸರನ್ನು ಸರಿಯಾಗಿ ಬಳಸುವಂತೆ ಸೂಚನೆ ಕೊಡಬೇಕು.

 * ಮುಖ್ಯ ತಿರುವುಗಳಲ್ಲಿ ಮಿರರ್‌ಗಳ ಅಳವಡಿಕೆ ಹಾಗೂ ಸಿಸಿ ಕ್ಯಾಮೆರಾಗಳ ಸ್ಥಾಪನೆ.

 * ಜನ ಸಾಮಾನ್ಯರಿಗೆ ಉಪಯೋಗವಾಗುವ ಮಾಹಿತಿ ಕೇಂದ್ರ ಸ್ಥಾಪನೆ.

ಮೂಲಸೌಕರ್ಯ ಮತ್ತು ಕಾನೂನು ವ್ಯವಸ್ಥೆ:

 *ಮೂಡುಬಿದಿರೆಯ ಎಲ್ಲಾ ಒಳ ರಸ್ತೆಗಳ ಕಾಮಗಾರಿ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ.

 *ಪೊಲೀಸರ ಕೊರತೆ, ಮೂಡುಬಿದಿರೆ ತಾಲೂಕಿಗೆ ಹೊರ ಠಾಣೆ (ಔಟ್ ಪೋಸ್ಟ್) ಮತ್ತು ಸಂಚಾರ ಪೊಲೀಸ್ ಠಾಣೆಯ ಅಗತ್ಯವಿದೆ.

 *ಡಿಜಿಟಲ್ ವ್ಯವಸ್ಥೆ ಮೂಲಕ ದೂರು ನೀಡುವ ವ್ಯವಸ್ಥೆ, ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಅಧಿಕಾರಿಗಳಿಗೆ ಸಮಸ್ಯೆ ತಿಳಿಸುವ ವ್ಯವಸ್ಥೆ ಆಗಬೇಕು.

ಪೂರ್ಣಚಂದ್ರ, ವಕೀಲ ಇರ್ಷಾದ್, ಹನೀಫ್, ಯತಿರಾಜ್ ಶೆಟ್ಟಿ, ಪತ್ರಕತ೯ ಯಶೋದರ ವಿ. ಬಂಗೇರಾ, ಪ್ರವೀಣ್ ಸಿಕ್ವೇರಾ, ಏರಿಕ್ ಲೋಬೊ, ಕೌಸ್ತುಭ್ ಜೈನ್, ಸತೀಶ್ ಶೆಟ್ಟಿ ಮತ್ತು ರಕ್ಷನ್ ಸೇರಿದಂತೆ ಹಲವು ಪ್ರಮುಖರು ಸಲಹೆಗಳನ್ನು ನೀಡಿದರು.

ಮೂಡುಬಿದಿರೆಯ ವಿವಿಧ ಶಾಲಾ-ಕಾಲೇಜುಗಳ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ವ್ಯಾಪಾರಸ್ಥರು ಸೇರಿದಂತೆ ಒಟ್ಟು 87 ಜನರು ಸಭೆಯಲ್ಲಿ  ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದರು. ಈ ಮೊದಲು ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನ ಆಗದ ಕಾರಣ, ಈಗ ಜನರೇ ಒಗ್ಗೂಡಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article