ಆಕಾರಕೇಂದ್ರಿತ ಹಾಗೂ ಬುದ್ಧಿಕೇಂದ್ರಿತ ಶಿಕ್ಷಣ ಸಂಸ್ಥೆ ಸಂತ ಫಿಲೋಮಿನಾ ಕಾಲೇಜು ಸದಾ ಪ್ರಜ್ವಲಿಸಲಿ: ಡಾ. ನರೇಂದ್ರ ರೈ ದೇರ್ಲ

ಆಕಾರಕೇಂದ್ರಿತ ಹಾಗೂ ಬುದ್ಧಿಕೇಂದ್ರಿತ ಶಿಕ್ಷಣ ಸಂಸ್ಥೆ ಸಂತ ಫಿಲೋಮಿನಾ ಕಾಲೇಜು ಸದಾ ಪ್ರಜ್ವಲಿಸಲಿ: ಡಾ. ನರೇಂದ್ರ ರೈ ದೇರ್ಲ


ಪುತ್ತೂರು: ಸಂತ ಫಿಲೋಮಿನಾ ಸಂಸ್ಥೆಯ ವಿದ್ಯಾರ್ಥಿ ಸಂಘದಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಘನತೆ, ಗೌರವ ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಆಕಾರಕೇಂದ್ರಿತ ಹಾಗೂ ಬುದ್ಧಿಕೇಂದ್ರಿತ ಈ ಶಿಕ್ಷಣ ಸಂಸ್ಥೆ ಸದಾ ಪ್ರಜ್ವಲಿಸಲಿ’ ಎಂದು ಕಾಲೇಜಿನ ಹಳೆವಿದ್ಯಾರ್ಥಿ ಡಾ. ನರೇಂದ್ರ ರೈ ದೇರ್ಲ ಹೇಳಿದರು.


ಅವರು ಇಂದು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿವಿ ಮಟ್ಟದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


‘ಪುತ್ತೂರಿನ ಹೆಮ್ಮೆಯ ಶಿಕ್ಷಣ ಸಂಸ್ಥೆ ಫಿಲೋಮಿನಾವನ್ನು ತಲುಪಲು ಸಿಗುವ ದಾರಿಗಳು ಹಲವು. ಮೊ. ಆಂಟನಿ ಪತ್ರಾವೊ ಅವರು ದೀನ ದಲಿತರ ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹದ ದಾರಿ ಒಂದಾದರೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳ ಹಾದಿ ಮತ್ತೊಂದು. 1986 ರಲ್ಲಿ ಆರಂಭವಾದ ಕೈ ಬರಹದ ಪತ್ರಿಕೆ ಅಂತರಂಗ ಫಿಲೋವಾಣಿಯ ಅಕ್ಷರದ ಪಥ ಇನ್ನೊಂದು. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳ ಸ್ವಸ್ಥ ಸುಸಂಸ್ಕೃತ ಮನಸ್ಸುಗಳನ್ನು ಕಟ್ಟುತ್ತಿರುವ ಉಪನ್ಯಾಸಕರ ಶೈಕ್ಷಣಿಕ ಸೇವೆಯ ಹಾದಿ ಮಗದೊಂದು ಎಂದರು.


ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ಪುತ್ತೂರು ಉಪ ವಿಭಾಗದ ಅಬಕಾರಿ ನಿರೀಕ್ಷಕಿ ಜೋಸ್ಲಿನ್ ಫೆರ್ನಾಂಡಿಸ್ ಮಾತನಾಡಿ, ನಶಾಮುಕ್ತ ಭಾರತ ಯೋಜನೆ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ‘ನಮ್ಮನ್ನು ನಾವು ಪ್ರೀತಿಸಿ, ನಂಬಿಕೆ ಮತ್ತು ವಿಶ್ವಾಸಗಳಿಂದ ಮುನ್ನುಗ್ಗಿದರೆ ಜಗತ್ತು ನಮ್ಮನ್ನು ಗುರುತಿಸುತ್ತದೆ. ಸತ್ವ ರಹಿತ ತೋರಿಕೆಯ ಜೀವನವು ಎಂದಿಗೂ ಸಲ್ಲದು.ಹುಡುಗಿಯರು ಸ್ವಾವಲಂಬಿಗಳಾಗಬೇಕು. ಆರಾಮದಾಯಕದಾಯಕ ವಲಯವನ್ನು ತೊರೆದರೆ ಮಾತ್ರ ಭವಿಷ್ಯವನ್ನು ಆರಾಮವಾಗಿ ಕಳೆಯಬಹುದು. ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಳ್ಳದಿರಿ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಾಲೇಜಿನ ಸಂಚಾಲಕರೂ ಆದ ಅ. ವಂ. ಲಾರೆನ್ಸ್ ಮಸ್ಕರೇನಸ್ ಅವರು ‘ವಿದ್ಯಾರ್ಥಿಗಳೇ ನಿಮ್ಮ ಹೃದಯವು ಸೇವೆಯ ಮನೋಭಾವನೆಯಿಂದ ಕೂಡಿರಲಿ. ಸಮಾಜಕ್ಕೆ ನಮ್ಮ ಜೀವನವು ಸುಂದರ ಕಾಣಿಕೆಯಾಗಿರಲಿ. ಭಗವಂತ ನೀಡಿದ ಜೀವನವೆಂಬ ಅಮೂಲ್ಯ ಉಡುಗೊರೆಯನ್ನು ಜೋಪಾನ ಮಾಡಿ’ ಎಂದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ನಾಯಕತ್ವ ಕೇವಲ ಜವಾಬ್ದಾರಿಯಲ್ಲ. ಸೇವೆಗೆ ಇನ್ನೊಂದು ದಾರಿ ಎಂದು ತಿಳಿಸಿದರು.

ಮಾಯಿದೆ ದೇವುಸ್ ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟಾ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ರಕ್ಷಕ-ಶಿಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಾದ ಡಾ. ಅಬೂಬಕರ್ ಆರ್ಲಪದವು, ಪ್ರತಿಮಾ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಫಿಲೋಪ್ರಭಾ ವಾರ್ಷಿಕ ಸಂಚಿಕೆಯನ್ನು ಜೋಸ್ಲಿನ್ ಫೆರ್ನಾಂಡಿಸ್ ಅವರು ಅನಾವರಣ ಮಾಡಿದರು. ಸಂಚಿಕೆಯ ಸಂಪಾದಕ ಡಾ. ವಿನಯ ಚಂದ್ರ ಅವರು ಕಾರ್ಯಕ್ರಮ ನೆರವೇರಿಸಿದರು.

2023-24ನೇ ಸಾಲಿನ ಮಂಗಳೂರು ವಿವಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ   ಲಾವಣ್ಯ ಕೆ. ಪ್ರಥಮ, ಎಂಎಸ್‌ಡಬ್ಲ್ಯೂ ವಿಭಾಗದಲ್ಲಿ ಅರ್ಪಿತಾ ತೃತೀಯ, ಬಿಎಸ್ಸಿ ವಿಭಾಗದಲ್ಲಿ ಸನ್ಮತಿ ದ್ವಿತೀಯ ಹಾಗೂ ಬಿಸಿಎ ವಿಭಾಗದಲ್ಲಿ ಚೈತ್ರಾಲಿ ನಾಲ್ಕನೇ ರ‍್ಯಾಂಕ್  ಪಡೆದು ಸನ್ಮಾನ ಸ್ವೀಕರಿಸಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾದ್ಯಾಪಕಿ ಅಕ್ಷತಾ ಬಿ., ಸಮಾಜಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಶ್ರೀಮಣಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ವಿನಯ್ ಚಂದ್ರ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಶಿಪ್ರಭಾ ಬಿ. ಕಾರ್ಯಕ್ರಮ ನೆರವೇರಿಸಿದರು.

ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯೂಸುಫ್ ಅಲ್ಫಾಜ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಝಮ್ಮಿಲ್ ಐ. ಉದ್ಘಾಟಕರನ್ನು ಪರಿಚಯಿಸಿದರು. ಯಜ್ಞೇಶ್ ಗೌರವ ಅತಿಥಿಯನ್ನು ಪರಿಚಯಿಸಿದರು. ಜೊತೆಕಾರ್ಯದರ್ಶಿ ಹಿಬಾ ಶೇಕ್ ವಂದಿಸಿದರು. ಪ್ರಿಯಾ ಎಂ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article