ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಪ್ರೊಫೆಷನಲ್ ಟೈಪ್ಸೆಟ್ಟಿಂಗ್ ವಿತ್ ಲಾಟೆಕ್’ ಕಾರ್ಯಾಗಾರ
Thursday, November 27, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇವರ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ‘ಓವರ್ಲೀಫ್ನಲ್ಲಿನ ಲಾಟೆಕ್ ಮೂಲಕ ವೃತ್ತಿಪರ ಮುದ್ರಣ ವಿನ್ಯಾಸ’ ವಿಷಯದ ಕುರಿತ ಕಾರ್ಯಾಗಾರವನ್ನು ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂಟೇರಿಯೋ ಅವರು ಆಧುನಿಕ ಅಕಾಡೆಮಿಕ್ ಬರವಣಿಗೆಯಲ್ಲಿ ಲಾಟೆಕ್ನ ಅಗತ್ಯತೆಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತುಬದ್ಧ ಅಧ್ಯಯನದ ಮಹತ್ವವನ್ನು ವಿವರಿಸಿದರು. ಸಂಶೋಧನಾ ಕಾರ್ಯಗಳಲ್ಲಿ ವಿನ್ಯಾಸದ ನಿಖರತೆ, ಉಲ್ಲೇಖದ ಕಟ್ಟುಪಾಡು ಮತ್ತು ಗಣಿತೀಯ ಸಂಕೇತಗಳ ಸರಿಯಾದ ಬಳಕೆಗೆ ಲಾಟೆಕ್ ಪರಿಣಾಮಕಾರಿಯಾದ ಸಾಧನವೆಂದು ಅವರು ಹೇಳಿದರು.
ವಿಶೇಷ ಉಪನ್ಯಾಸಕಾರರಾಗಿ ಭಾಗವಹಿಸಿದ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ವಾಮಂಜೂರು ಇವರ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ, ವಿಭಾಗದ ಮುಖ್ಯಸ್ಥರೂ ಆಗಿರುವ ಡಾ. ಜಗದೀಶ ಬಿ. ಅವರು ಸಂಶೋಧನಾ ಪ್ರಬಂಧಗಳು, ತಾಂತ್ರಿಕ ವರದಿಗಳು ಮತ್ತು ವೃತ್ತಿಪರ ದಸ್ತಾವೇಜುಗಳ ರಚನೆಯಲ್ಲಿ ಲಾಟೆಕ್‌ನ ಬಳಕೆ ಹೇಗೆ ವಿಷಯವನ್ನು ಸೊಗಸಾಗಿ, ಶಿಸ್ತಿನೊಂದಿಗೆ ಮಂಡಿಸಲು ನೆರವಾಗುತ್ತದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕರಾದ ಪ್ರೊ. ಗಣೇಶ್ ಭಟ್ ಕೆ. ಅವರು ಉನ್ನತ ಶಿಕ್ಷಣದಲ್ಲಿ ಲಾಟೆಕ್ನ ಹೆಚ್ಚುತ್ತಿರುವ ಬಳಕೆಯನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿದರು.
ತಾಂತ್ರಿಕ ತರಗತಿಗಳನ್ನು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಡಾ. ಜಗದೀಶ ಬಿ. ಹಾಗೂ ಡಾ. ರಮಣಂದ ಎಚ್. ಎಸ್. ನಡೆಸಿದರು.
ಪ್ರಥಮ ಎಂ.ಎಸ್ಸಿ. ಗಣಿತಶಾಸ್ತ್ರ ವಿದ್ಯಾರ್ಥಿನಿ ಶ್ರೀದೇವಿ ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.

