ಸಂತ ಫಿಲೋಮಿನಾ ಕಾಲೇಜಿಗೆ ಹಳೆಯ ವಿದ್ಯಾರ್ಥಿಗಳ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ
ಮತ್ತೊಬ್ಬ ಹಿರಿಯ ಹಳೆಯ ವಿದ್ಯಾರ್ಥಿ ಡಾ. ಜನಾರ್ಧನ ಕೊಣಾಜೆ ಅವರು ತಮ್ಮ ಅನುಭವ ಹಂಚಿಕೊಳ್ಳುತ್ತ, ಕಾಲೇಜಿನ ಶಿಸ್ತು, ವಿನಮ್ರತೆ ಮತ್ತು ಸಮಾಜಸೇವೆಯ ಮೌಲ್ಯಗಳನ್ನು ಒತ್ತಿಹೇಳಿದರು. ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದ ಅಧ್ಯಾಪಕರ ನೆನಪು ಹಾಗೂ ಸಮಯ ಪಾಲನೆ ಹಾಗೂ ಹೊಣೆಗಾರಿಕೆಯ ಮಹತ್ವವನ್ನು ಒತ್ತಿ ಹೇಳುವ ಶಿಕ್ಷಕರನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.
ಭೌತಶಾಸ್ತ್ರ ವಿಭಾಗದ ಹಿಂದಿನ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಪಿ. ಕರಟ್ ಮಾತನಾಡಿ, ‘ಇಲ್ಲಿ ನಾನು ಕಲಿತ ಶಿಸ್ತು ಮತ್ತು ವಿದ್ಯಾರ್ಥಿಗಳ ಕಲ್ಯಾಣದ ಬಗ್ಗೆ ಇದ್ದ ಕಾಳಜಿ, ನನ್ನ ವೈಯಕ್ತಿಕ ಮತ್ತು ಶೈಕ್ಷಣಿಕ ಜೀವನದಲ್ಲಿ ಮಾರ್ಗದರ್ಶಕ ಶಕ್ತಿಯಾಯಿತು’ ಎಂದು ಹೇಳಿದರು.
ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯನ್ನು ಬೆಳೆಸಲು ಈ ಸಂಸ್ಥೆ ವೇದಿಕೆಯಾಗಿ ಕೆಲಸ ಮಾಡಿದೆ ಎಂಬುದನ್ನೂ ಅವರು ನೆನಪಿಸಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು, ಹಳೆಯ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅವರ ಮೌಲ್ಯಗಳು, ಶಿಸ್ತು, ಸಂಕಲ್ಪ ಮತ್ತು ಕೇಂದ್ರೀಕೃತ ದೃಷ್ಟಿ ಕಾಲೇಜಿನ ಧ್ಯೇಯವಾಕ್ಯಕ್ಕೆ ಇಂದಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು. ಈಗಿನ ವಿದ್ಯಾರ್ಥಿಗಳು ಈ ಹಿರಿಯರನ್ನು ಜೀವನದಲ್ಲಿ ಮಾದರಿಯನ್ನಾಗಿ ತೆಗುಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಅವರು ಗೌರವಾನ್ವಿತರಿಗೆ ಸ್ವಾಗತ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹಾಜರಿದ್ದರು.

