ಫಿಲೋಮಿನಾ ಕಾಲೇಜಿನ 7 ಮಂದಿ ಕೆ-ಸೆಟ್‌ನಲ್ಲಿ ತೇರ್ಗಡೆ
Thursday, November 27, 2025
ದರ್ಬೆ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದಿರುವ ನೋಡಲ್ ಏಜೆನ್ಸಿ ಕೆಇಎಯು ನವೆಂಬರ್ 2 ರಂದು ನಡೆಸಿರುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ವಿದ್ಯಾಸಂಸ್ಥೆಯ ಐವರು ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 7 ಮಂದಿ ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಶ್ರದ್ಧಾ ಯು.ಎಸ್., ಲಾವಣ್ಯ ಕೆ.ಎಂ., ಚಸ್ಮಿಕಾ ಟಿ. ಹಾಗೂ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿ ನಿತೀಶ್ ಎಂ. ಮತ್ತು ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಭಾವನಾ ಕೆ.ಜೆ. ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದವರು.
ಈ ಮೂಲಕ ವಿದ್ಯಾರ್ಥಿಗಳು ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕ ಹೊಂದಲು ಬೇಕಾಗಿರುವ ಅರ್ಹತಾ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳೊಂದಿಗೆ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾದ್ಯಾಪಕರುಗಳಾದ ಶೀತಲ್ ಕುಮಾರ್ ಅವರು ಇತಿಹಾಸ ಹಾಗೂ ದೀಪಿಕಾ ಅವರು ಗಣಿತಶಾಸ್ತ್ರ ವಿಷಯದಲ್ಲಿ ಕೆ-ಸೆಟ್ ತೇರ್ಗಡೆಯಾಗಿದ್ದಾರೆ.
ಪ್ರಸ್ತುತ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಷಯದ ಕುರಿತು ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದಿಂದ ಹಾಗೂ ವಿಷಯವಾರು ಪತ್ರಿಕೆಗಳಿಗೆ ಆಯಾ ವಿಭಾಗಗಳಿಂದ ತರಬೇತಿ ನೀಡಲಾಗಿತ್ತು. ವಿಶಿಷ್ಟ ಸಾಧನೆಗೈದ ಈ ವಿದ್ಯಾರ್ಥಿಗಳನ್ನು ಹಾಗೂ ಪ್ರಾಧ್ಯಾಪಕರುಗಳನ್ನು ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ, ಸ್ನಾತಕೋತ್ತರ ವಿಭಾಗ ಸಂಯೋಜಕರುಗಳಾದ ಗಣೇಶ್ ಭಟ್, ವಿಪಿನ್ ನಾಯ್ಕ್, ಹರ್ಷಿತ್ ಆರ್. ಅಭಿನಂದಿಸಿದ್ದಾರೆ.
