ಬೃಹತ್ ಶಿಲಾಯುಗದ ನಿಲ್ಸ್‌ಕಲ್‌ಗಳು ಪತ್ತೆ

ಬೃಹತ್ ಶಿಲಾಯುಗದ ನಿಲ್ಸ್‌ಕಲ್‌ಗಳು ಪತ್ತೆ


ಉಡುಪಿಯ ರಾಷ್ಟ್ರೀಯ ಸಂಘಟನೆ, ಆದಿಮ ಕಲಾ ಟ್ರಸ್ಟ್ ಇತ್ತೀಚಿಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯಲ್ಲಿ, ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಿಲ್ಕೋಡು ಮತ್ತು ಮಾವಿನಕೆರೆಯಲ್ಲಿ ಬೃಹತ್ ಶಿಲಾಯುಗ ಕಾಲದ ಎರಡು ನಿಲ್ಸ್‌ಕಲ್‌ಗಳು ಕಂಡುಬಂದಿವೆ ಎಂದು ತಿಳಿಸಿದೆ. 

ಕುಂದಾಪುರ ತಾಲೂಕಿನ ನೇರಳೆಕಟ್ಟೆಯಿಂದ ಆಜ್ರಿಗೆ ಹೋಗುವ ರಾಜ್ಯ ಹೆದ್ದಾರಿಯ ಎಡಬದಿಯ ದೈವದ ಹಾಡಿಯಲ್ಲಿ ಹಿಲ್ಕೋಡಿನ ನಿಲ್ಸ್‌ಕಲ್ ಇದೆ. ಸ್ಥಳೀಯವಾಗಿ ಜನರು ಅದನ್ನು ನೀಚ ದೈವ/ಬೊಬ್ಬರ್ಯನ ಕಲ್ಲು ಎಂದು ಕರೆಯುತ್ತಾರೆ. ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ, ಮಾವಿನಕೆರೆ ಹಾಡಿಯಲ್ಲಿ ರಸ್ತೆ ಬದಿಯಲ್ಲಿಯೇ ಮತ್ತೊಂದು ನಿಲ್ಸ್‌ಕಲ್ ಕಂಡುಬರುತ್ತದೆ.


ಇತ್ತೀಚಿಗೆ ಸ್ಥಳೀಯರು ಈ ನಿಲುವುಗಲ್ಲಿನ ಅರ್ಧಭಾಗಕ್ಕೆ ಒಂದು ಕಟ್ಟೆಯನ್ನು ಕಟ್ಟಿ ಅದನ್ನು ರಕ್ತೇಶ್ವರಿ ಎಂದು ಆರಾಧಿಸುತ್ತಿದ್ದಾರೆ ಎಂದು ಪುರಾತತ್ತ್ವ ವಿದ್ವಾಂಸ ಮತ್ತು ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕ ಪ್ರೊ. ಟಿ. ಮುರುಗೇಶಿಯವರು ಇಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾವಿನಕೆರೆಯನಿಲ್ಸ್‌ಕಲ್ 112 ಸೆ.ಮೀ ಎತ್ತರವಿದೆ ಹಾಗೂ ಪಶ್ಚಿಮೋತ್ತರದ ಕಡೆ ಸ್ವಲ್ಪ ವಾಲಿದಂತೆ ಮುಖವನ್ನು ನಿರ್ದೇಶಿಸಲಾಗಿದೆ. ಹಿಲ್ಕೋಡಿನ ನಿಲ್ಸ್‌ಕಲ್ ಸುಮಾರು 135 ಸೆ.ಮೀ ಎತ್ತರವಿದೆ. ಹಿಲ್ಕೋಡುವಿನ ನಿಲ್ಸ್‌ಕಲ್ ಕೆಳಗೆ ಪರೀಕ್ಷಾರ್ಥವಾಗಿ ನಡೆಸಿದ ಅಗೆತದಲ್ಲಿ ಕೆಂಪು ಮತ್ತು ಕೆನೆಬಣ್ಣದ ಮಡಕೆ ಅವಶೇಷದ ತುಣುಕುಗಳು ಕಂಡುಬಂದಿವೆ.

ಬೃಹತ್ ಶಿಲಾಯುಗ ಸಂಸ್ಕೃತಿಯ ಜನರು, ಅಂತ್ಯ ಸಂಸ್ಕಾರದ ನಂತರ ಸಮಾಧಿಗಳ ಮೇಲೆ ಅಥವಾ ಸಮಾಧಿಯ ಸಮೀಪದಲ್ಲಿಯೋ ನೆನಪಿನ ಸ್ಮಾರಕಗಳಾಗಿ ಬೃಹತ್ ನಿಲುವುಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಸಾಮಾನ್ಯವಾಗಿ ನಿಲುವುಗಲ್ಲುಗಳು 3 ಅಡಿ ಎತ್ತರದಿಂದ 16, 17 ಅಡಿ ಎತ್ತರದವರೆಗೆ ಇರುವುದು ಕಂಡು ಬರುತ್ತವೆ. ದಕ್ಷಿಣ ಭಾರತದಾದ್ಯಂತ ಕಂಡುಬರುವ ನಿಲುವುಗಲ್ಲುಗಳನ್ನು ರಕ್ಕಸಗಲ್ಲು, ನಿಲ್ಸ್‌ಕಲ್, ನಿಂತಿಕಲ್ಲು, ಗರ್ಭಿಣಿಯರ ಕಲ್ಲು, ಬಸುರಿಕಲ್ಲು, ಆನೆಕಲ್ಲು, ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. 

ಚಾರಿತ್ರಿಕ ಮಹತ್ವ:

ಮಾವಿನಕೆರೆ ಮತ್ತು ಹಿಲ್ಕೋಡಿನ ನಿಲ್ಸ್‌ಕಲ್ಲುಗಳು, ಬೃಹತ್ ಶಿಲಾಯುಗದ ಅಂತ್ಯಕಾಲದ ಅವಶೇಷಗಳಾಗಿವೆ. ಹಿಲ್ಕೋಡಿನ ನಿಲ್ಸ್‌ಕಲ್ಲಿನ ಕೆಳಭಾಗದಲ್ಲಿ ದೊರೆತ ಕೆಂಪು ಮತ್ತು ಕೆನೆಬಣ್ಣದ ಮಡಕೆಯ ಅವಶೇಷಗಳು ಈ ಅಭಿಪ್ರಾಯವನ್ನು ಸಮರ್ಥಿಸುತ್ತವೆ. ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ನಿಲ್ಸ್‌ಕಲ್ ಮತ್ತು ಹೆರಗಲ್ ಸಮೂಹದ ನಿಲುವುಗಲ್ಲುಗಳು ಕಾಲಮಾನದ ದೃಷ್ಠಿಯಿಂದ ಬಹಳ ಪ್ರಾಚೀನವಾಗಿದ್ದು, ಸುಮಾರು ಕ್ರಿ.ಪೂ. 800 ರ ಕಾಲದವುಗಳೆಂದು ತರ್ಕಿಸಲಾಗಿದೆ. ಆದರೆ, ಕುಂದಾಪುರದ ನಿಲ್ಸ್‌ಕಲ್‌ಗಳು ಕ್ರಿ.ಪೂ. 300 ರಿಂದ ಕ್ರಿ.ಶ. 1 ಅಥವಾ 2ನೇ ಶತಮಾನಕ್ಕೆ ಸೇರಿದವುಗಳಾಗಿವೆ.

ತುಳುನಾಡಿನ ಸಾಂಸ್ಕೃತಿಕ ಬದುಕಿನ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡಿರುವ, ಬೃಹತ್ ಶಿಲಾಯುಗದ ಅವಶೇಷಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ. ಈ ಸಂಶೋಧನೆಯಲ್ಲಿ ನೆರವು ನೀಡಿದ ವಿಶ್ವನಾಥ್ ಗುಲ್ವಾಡಿ, ಸುಧಾಕರ್ ಶೆಟ್ಟಿ, ಸಿ, ನಾಗರಾಜ್ ಶೆಟ್ಟಿ ಕೃಷಿ ಅಧಿಕಾರಿ, ಮಂಜು ಪೂಜಾರಿ, ಹಿಲ್ಕೋಡು, ನಾಗೇಶ್ ಗಾಣಿಗ, ಆದಿಮ ಕಲಾ ಸಂಶೋಧನಾ ತಂಡದ ಸದಸ್ಯರಾದ ಮುರುಳೀಧರ ಹೆಗಡೆ, ಇಡೂರು-ಕುಂಜ್ಞಾಡಿ, ಶ್ರೇಯಸ್ ಬಂಟಕಲ್, ಗೌತಮ್ ಬೆಳ್ಮಣ್ ಮತ್ತು ರವೀಂದ್ರ ಕುಷ್ವಾಹ ಅವರಿಗೆ ನಾನು ಅಭಾರಿಯಾಗಿರುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article