ಬೀಡಿ ಕಾರ್ಮಿಕರ ಆರನೇ ದ.ಕ. ಜಿಲ್ಲಾ ಸಮ್ಮೇಳನ

ಬೀಡಿ ಕಾರ್ಮಿಕರ ಆರನೇ ದ.ಕ. ಜಿಲ್ಲಾ ಸಮ್ಮೇಳನ


ಉಳ್ಳಾಲ: ಬೀಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಏರಿಕೆಯಾದ ತುಟ್ಟಿಭತ್ಯೆ ಕನಿಷ್ಠ ಕೂಲಿ ಪಾವತಿಯ ಬೇಡಿಕೆ ಇಟ್ಟು ಸಿಐಟಿಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಆರನೇ ದ.ಕ. ಜಿಲ್ಲಾ ಸಮ್ಮೇಳನ ಕೊಲ್ಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗಲು ಒಂದು ಸೆಸ್ ಅನ್ನು ಬೀಡಿ ಮಾಲೀಕರು ಸರ್ಕಾರಕ್ಕೆ ಕೊಡಬೇಕು. ಈಗ ಸೆಸ್ ನೀಡುವುದನ್ನು ಮಾಲೀಕರು ನಿಲ್ಲಿಸಿದ್ದಾರೆ. ಈ ಕಾರಣದಿಂದ ಕಾರ್ಮಿಕರಿಗೆ ಕೆಲಸ, ಕೂಲಿ ಸಿಗುತ್ತಿಲ್ಲ. ಈ ಬೀಡಿ ಕಾರ್ಮಿಕರಿಗೆ ಪರ್ಯಾಯ ಜೀವನವನ್ನು ಮಾಲೀಕರು ರೂಪಿಸಬೇಕು ಎಂದರು.

ಬೆರಳೆಣಿಕೆಯಷ್ಟು ಬಂಡವಾಳ ಶಾಹಿಗಳ ಕೈಯಲ್ಲಿ ಈ ದೇಶದ ಸಂಪತ್ತು ಸೇರಿಕೊಂಡಿದೆ. ಬಹುಪಾಲು ಸಂಖ್ಯೆಯಲ್ಲಿ ಬಡವರು ಇಲ್ಲಿದ್ದಾರೆ. ಹೀಗೆ ಮುಂದುವರೆದರೆ ಅಭಿವೃದ್ಧಿ ಕಾಣದು ಎಂದರು.

ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಬಂದಿಲ್ಲ. ಆದರೆ ಏನು ಕೊಡದ ಕೇಂದ್ರ ಸರ್ಕಾರಕ್ಕೆ ಸಂಕಷ್ಟ ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಆಗಲ್ಲ ಎಂದು ಆರೋಪ ಮಾಡುವ ಬಿಜೆಪಿ ಯವರಿಗೆ ಜನಪರ ಕೆಲಸ ಯಾಕೆ ಮಾಡಲಾಗಿಲ್ಲ ಎಂದು ಪ್ರಶ್ನಿಸಿದರು.

ಹುಂಡಿಗೆ ದುಡ್ಡು ಹಾಕುವವನು ಧರ್ಮ ರಕ್ಷಕ ಆಗಿರುವುದಿಲ್ಲ. ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣುವವನು ಮಾತ್ರ ಧರ್ಮ ರಕ್ಷಕ ಆಗಿರುತ್ತಾನೆ. ಮುಟ್ಟಾದ ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆ ನೀಡಬೇಕು. ಅವರನ್ನು ಅಪಮಾನ ಮಾಡುವುದು ಧರ್ಮ ವಿರೋಧಿ ನೀತಿ ಆಗಿದೆ ಎಂದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಬೀಡಿ ಕಾರ್ಮಿಕರ ಸಂಕಷ್ಟದ ಬಗ್ಗೆ ಅರ್ಥ ಮಾಡಿಕೊಳ್ಳುವವರು ಇಲ್ಲವಾಗಿದ್ದಾರೆ. ಸರ್ಕಾರ ಕೂಡ ಕಾರ್ಮಿಕ ವಿರೋಧಿ ನೀತಿ ಜಾರಿ ಮಾಡಿದೆ. ಕನಿಷ್ಠ ಕೂಲಿ ನೀಡುವ ವಿಚಾರದಲ್ಲಿ ಸರ್ಕಾರ ಮೌನ ಆಗಿದೆ ಎಂದು ಆರೋಪಿಸಿದರು.

ಬೀಡಿ ಕಾರ್ಮಿಕರ ಪರ ಹಲವು ಹೋರಾಟ ಮಾಡಿದರೂ ನಮ್ಮ ಸಂಸದರು ಮಾತನಾಡುತ್ತಿಲ್ಲ. ಈ ಜಗತ್ತು ದುಡಿಯುವವರ ಶ್ರಮದ ಮೇಲೆ ನಿಂತಿದೆ. ಈ ದುಡಿಯುವ ವರ್ಗದ ಜನರನ್ನು ಮೂಲೆಗುಂಪು ಮಾಡುವ ಕೆಲಸ ಆಗುತ್ತಿದೆ. ಈ ವರ್ಗವನ್ನು ಉಳಿಸುವ ಕೆಲಸ ನಾವು ಹೋರಾಟದ ಮೂಲಕ ಮಾಡಬೇಕು ಎಂದು ಕರೆ ನೀಡಿದರು.

ಬೇಬಿ ಶೆಟ್ಟಿ ಮಂಜೇಶ್ವರ ಮಾತನಾಡಿದರು.

ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದ್ಮಾವತಿ ಕುತ್ತಾರ್ ಧ್ವಜಾರೋಹಣ ನೆರವೇರಿಸಿದರು.

ಕರ್ನಾಟಕ ರಾಜ್ಯ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸಯ್ಯದ್ ಮುಜೀಬ್, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಪದ್ಮಾವತಿ ಎಸ್. ಶೆಟ್ಟಿ, ಜಯಂತಿ ಶೆಟ್ಟಿ, ರಮಣಿ ಮೂಡುಬಿದಿರೆ, ಸಿಐಟಿಯು ಗೌರವ ಅಧ್ಯಕ್ಷ ಬಿ. ಲೋಕಯ್ಯ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜಯಂತ್ ನಾಯಕ್, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಪ್ರೇಮ ಶೆಟ್ಟಿ ಮಂಜೇಶ್ವರ, ಕವಿರಾಜ ಉಡುಪಿ, ಬಿ.ಎಂ. ಭಟ್ ಬೆಳ್ತಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಸ್ವಾಗತಿಸಿ, ವರದಿ ವಾಚಿಸಿದರು. ಪ್ರಮೋದಿನಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article