ಬೀಡಿ ಕಾರ್ಮಿಕರ ಆರನೇ ಜಿಲ್ಲಾ ಸಮ್ಮೇಳನ ಪ್ರಯುಕ್ತ ಬಹಿರಂಗ ಸಭೆ
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರ ನೋವುಗಳಿಗೆ ಪರಿಹಾರ ಹುಡುಕಬೇಕು, ದೇಶ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಗುರಿ. ಜಿಎಸ್‌ಟಿ ಕಡಿಮೆ ಮಾಡಲಾಗಿದೆ. ಎಲ್ಲರೂ ಹಣ ಉಳಿಸಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಜಿಎಸ್‌ಟಿ ಏರಿಸುವುದು, ಇಳಿಸುವುದು ಇವರೇ. ಇದಕ್ಕೇನರ್ಥ ಎಂದು ಪ್ರಶ್ನಿಸಿದರು.
ಪಂಚ ಗ್ಯಾರಂಟಿ ಜಾರಿ ಮಾಡಿದ ರಾಜ್ಯ ಸರ್ಕಾರ ಬಿಕ್ಕಟ್ಟಿನಲ್ಲಿ ಇದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಪಾರ್ಲಿಮೆಂಟ್ ಸಂಸದರ, ಶಾಸಕರ ವೇತನ ಈಗಾಗಲೇ ಏರಿಕೆ ಮಾಡಿದೆ. ಆದರೆ ಬೀಡಿ ಕಾರ್ಮಿಕರ ವೇತನ ಯಾಕೆ ಏರಿಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ ಅವರು ಸ್ಪೀಕರ್ ಯು.ಟಿ. ಖಾದರ್ ಸಾಕಷ್ಟು ದುಡ್ಡು ಮಾಡಿದ್ದಾರೆ. ಆದರೆ ಇವರೆಲ್ಲ ಬೀಡಿ ಕಾರ್ಮಿಕರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 1000 ಬೀಡಿಗೆ 370 ಆಗಬೇಕು ಎಂಬುದು ನಮ್ಮ ಬೇಡಿಕೆ. ಇದನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಒಂದು ಕುಟುಂಬದ ಖರ್ಚಿಗೆ ತಿಂಗಳಿಗೆ 30 ಸಾವಿರ ಬೇಕು. ಈ ಲೆಕ್ಕಾಚಾರ ಹಾಕಿದರೆ ಒಂದು ಸಾವಿರ ಬೀಡಿಗೆ ಒಂದು ಸಾವಿರ ಸಿಗಬೇಕು. ಆದರೆ ನಾವು ಕೇವಲ 1000 ಬೀಡಿಗೆ 370 ರೂ.ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಬೀಡಿ ಕಾರ್ಮಿಕರ ಚಳವಳಿಯನ್ನು ಉತ್ತುಂಗಕ್ಕೆ ಏರಿಸಬೇಕು. ಬೀಡಿ ಕಾರ್ಮಿಕರಿಗೆ ನ್ಯಾಯ ಸಿಗಬೇಕು. ದುಡಿಯುವ ವರ್ಗದ ಜನರ ಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆದರೆ ಇವರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬೀಡಿ ಕಟ್ಟುವ ಕಾರ್ಮಿಕರ ಹಕ್ಕುಗಳನ್ನು ಸರ್ಕಾರ ಕಸಿದು ಕೊಳ್ಳುತ್ತಿದೆ. ಯಾವುದೇ ಸವಲತ್ತು ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಗಂಭೀರವಾಗಿ ಅರ್ಥ ಮಾಡಿಕೊಂಡು ನ್ಯಾಯ ಒದಗಿಸಲು ಯಾಕಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಸ್ಪೀಕರ್ ಯುಟಿ ಖಾದರ್ ಬೀಡಿ ಕಾರ್ಮಿಕರ ವಿಚಾರದಲ್ಲಿ ಮಾತನಾಡುವುದಿಲ್ಲ. ನ್ಯಾಯ ಒದಗಿಸಿ ಕೊಡುವುದಿಲ್ಲ. ಇವರ ಸ್ಪೀಕರ್ ಕಚೇರಿ ಒಳಗಡೆ ಭ್ರಷ್ಟಾಚಾರ ನಡೆಯುತ್ತಿದೆ. ಅವರು ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಬೀಡಿ ಕಾರ್ಮಿಕರಿಗೆ ಆಗಿರುವ ಅನ್ಯಾಯಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಕಾರಣ. ಈ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ, ಉಪಾಧ್ಯಕ್ಷ ಪದ್ಮಾವತಿ ಮಾತನಾಡಿದರು.
ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಮಂಡಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತೊಕ್ಕೊಟ್ಟುವಿನಿಂದ ಅಂಬೇಡ್ಕರ್ ಮೈದಾನ ವರೆಗೆ ಆಕರ್ಷಕ ರ‍್ಯಾಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಉಪಾಧ್ಯಕ್ಷ ಪದ್ಮಾವತಿ ಎಸ್. ಶೆಟ್ಟಿ, ಜಯಂತಿ ಶೆಟ್ಟಿ, ರಮಣಿ ಮೂಡುಬಿದಿರೆ, ಸಿಐಟಿಯು ಗೌರವ ಅಧ್ಯಕ್ಷ ಬಿ. ಲೋಕಯ್ಯ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜಯಂತ್ ನಾಯಕ್, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಪ್ರೇಮ ಶೆಟ್ಟಿ ಮಂಜೇಶ್ವರ, ಬಿ.ಎಮ್. ಭಟ್ ಬೆಳ್ತಂಗಡಿ, ಬೇಬಿ ಶೆಟ್ಟಿ ಮಂಜೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜಯಂತ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಸಂತಿ ಕುಪ್ಪೆಪದವು ವಂದಿಸಿದರು.
