ಲೈಂಗಿಕ ದೌರ್ಜನ್ಯ: ಪೊಕ್ಸೊ ಪ್ರಕರಣ ದಾಖಲು
ಬೆಳ್ತಂಗಡಿ: ಅಂಗಡಿಗೆ ಬರುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಂಗಡಿ ಮಾಲಕನೊಬ್ಬನ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.
ಟಿಕ್ಕಾ ಮುಹಮ್ಮದ್ ಗೇರುಕಟ್ಟೆ ಎಂಬಾತ ಆರೋಪಿಯಾಗಿದ್ದು, ಆತನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೊಂದ ಬಾಲಕಿ ಅಂಗಡಿಗೆ ಹೋದಾಗ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ. ಮೂರ್ನಾಲ್ಕು ಬಾರಿ ಇದೇ ರೀತಿ ದೌರ್ಜನ್ಯ ಎಸಗಿರುವ ಆರೋಪಿ, ಈ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ ಬಾಲಕಿಯು ಒಂದು ದಿನ ಬೀಗ ತೆರೆದಿದ್ದ ಅಂಗಡಿಯ ಒಳಗೆ ಪ್ರವೇಶಿಸಿ ಹೊರಬರುತ್ತಿದ್ದ ವೇಳೆ ದಾಖಲಾಗಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆರೋಪಿ ಬೇರೆಯವರಿಗೆ ಕಳುಹಿಸಿ ಆಕೆ ಕಳ್ಳಿ ಎಂದು ಬಿಂಬಿಸುವ ಯತ್ನ ಮಾಡಿದ್ದಾನೆ ಎಂದೂ ದೂರಲಾಗಿದೆ.
ನೊಂದ ಬಾಲಕಿ ನೀಡಿದ ದೂರಿನಂತೆ ಮುಹಮ್ಮದ್ ಗೇರುಕಟ್ಟೆ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.