ಕಾಳಾವರ ಪಂಚಾಯತ್: ಕುಡಿವ ನೀರಿನ ಸಮಸ್ಯೆ-ರೊಚ್ಚಿಗೆದ್ದ ಜನರು
ಈ ಬಗ್ಗೆ ಗ್ರಾಮ ಪಂಚಾಯತ್ ಕೊಡುವ ಕಾರಣ ಬಡಾಗುಡ್ಡೆ ನಿವಾಸಿಗಳು ಪಂಚಾಯತ್ ಗೆ ನೀರಿನ ಕರ ಪಾವತಿಸುತ್ತಿಲ್ಲ ಎಂಬುದು.
ಬಡಾಗುಡ್ಡೆ ಜನತಾ ಕಾಲೋನಿಯಲ್ಲಿ ಸುಮಾರು 15 -20 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ನೀರಿನ ಸಮಸ್ಯೆಯು ಸಾಮಾನ್ಯವಾಗಿ ಬಿಟ್ಟಿದೆ. ಹಲವಾರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಪಂಚಾಯತ್ ನಲ್ಲಿ ನಿವಾಸಿಗಳು ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂದಿಗೂ ಕಲುಷಿತ ನೀರನ್ನು ಕುಡಿದುಕೊಂಡೇ ಬದುಕುವ ಅವಸ್ಥೆಯಾಗಿದೆ.
ಬಡಾಗುಡ್ಡೆ ಜನತಾ ಕಾಲೋನಿಯ ನಿವಾಸಿಗಳು ತಮಗೆ ಪಂಚಾಯತ್ ಕುಡಿಯಲು ಯೋಗ್ಯವಲ್ಲದ ನೀರನ್ನು ನೀಡುತ್ತಿದೆ ಎಂದು ದೂರಿ ಪಂಚಾಯಿತಿಗೆ ನೀಡಬೇಕಾಗಿದ್ದ ನೀರಿನ ಕರವನ್ನು ನಿವಾಸಿಗಳು ಕೊಡುತ್ತಿರಲಿಲ್ಲ. ತಮ್ಮ ಬೇಡಿಕೆಯನ್ನು ಮೊದಲು ಈಡೇರಿಸಿ ಎಂದು ಅಹವಾಲು ಇಟ್ಟಿದ್ದರು.
ಬಿಲ್ ಕಟ್ಟದ ಮನೆಗಳ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಕಾಳಾವರ ಗ್ರಾಮ ಪಂಚಾಯತ್ ನೋಟಿಸ್ ನೀಡಿ, ಅವಧಿ ಮುಗಿದ ಕೂಡಲೇ ನೀರಿನ ಸಂಪರ್ಕವನ್ನೇ ಕಡಿತಗೊಳಿಸಿ ಪೈಪ್ ಗೆ ಎಂಡ್ ಕ್ಯಾಪ್ ಹಾಕಿದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಜನ ಪಂಚಾಯಿತಿಗೆ ಹಿಡಿ ಶಾಪ ಹಾಕಿದರು. ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವ ವಿಚಾರ ಕೂಡ ಚರ್ಚೆ ಮಾಡಿದರು. ಇದಾದ ನಂತರ ಗ್ರಾಮ ಪಂಚಾಯತ್ ಡಿಸೆಂಬರ್ 11 ರಂದು ಬಡಾಗುಡ್ಡೆ ನಿವಾಸಿಗಳ ಹಾಗೂ ದಲಿತ ಸಮುದಾಯದವರ ಸಭೆ ಕರೆದು ಚರ್ಚಿಸುವ ಭರವಸೆ ಹಾಗೂ ತೀರ್ಮಾನ ಕೈಗೊಂಡಿತು.
ಗ್ರಾಮ ಪಂಚಾಯತ್ ಸಭಾಭವನದಲ್ಲಿ ಈ ಕುರಿತು ಚರ್ಚೆ ಮಾಡಿ ಒಂದು ಅಂತಿಮ ನಿರ್ಧಾರಕ್ಕೆ ಬರಲಾಯಿತು . ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ತಾವುಗಳು ಪಡೆಯುವ ತನಕ ನೀರಿನ ಕರವನ್ನು ಸದ್ಯ ಪಾವತಿಸುವುದು ಬೇಡ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆದಮೇಲೆ ಅನುಕೂಲಕ್ಕೆ ತಕ್ಕಂತೆ ಕಟ್ಟಬೇಕು ಎಂದು ಆಶ್ವಾಸನೆ ನೀಡಲಾಯಿತು. ಹಾಗೂ ದಲಿತ ಸಮುದಾಯದ ನೀರಿನ ಕರವನ್ನು ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಲಾಯಿತು.
ಈ ಚರ್ಚಾ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ ಶೆಟ್ಟಿಗಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ ಹಾಗೂ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಸಮುದಾಯದ ಮುಂದಾಳುಗಳು ಉಪಸ್ಥಿತರಿದ್ದರು.