ಭೀಕರ ಬೆಂಕಿ ದುರಂತ ಪ್ರಕರಣ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಂಜುನಾಥ ಭಂಡಾರಿ
Monday, December 29, 2025
ಕುಂದಾಪುರ: ಇಲ್ಲಿನ ಪೇಟೆಯ ಹೃದಯಭಾಗವಾದ ರಥಬೀದಿಯಲ್ಲಿ ಇಂದು ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿ ವೆಂಕಟರಮಣ ದೇವಸ್ಥಾನದ ಎದುರಿನ ಕಟ್ಟಡದಲ್ಲಿದ್ದ ಹಲವು ವ್ಯಾಪಾರ ಮಳಿಗೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಅಂಗಡಿ ವರ್ತಕರಲ್ಲಿ ಧೈರ್ಯ ತುಂಬಿದ ಅವರು ದುರಂತದಿಂದ ಸಂಭವಿಸಿದ ನಷ್ಟಕ್ಕೆ ಸಂತಾಪ ವ್ಯಕ್ತಪಡಿಸಿದರು. ಸರ್ಕಾರದ ಮಟ್ಟದಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಬೆಳಗಿನ ಜಾವ ಈ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗಳು ಕ್ಷಣಾರ್ಧದಲ್ಲೇ ಇಡೀ ಕಟ್ಟಡವನ್ನು ಆವರಿಸಿವೆ. ಅಂಗಡಿಗಳಲ್ಲಿದ್ದ ವಸ್ತುಗಳು, ಫರ್ನಿಚರ್, ವಿದ್ಯುತ್ ಉಪಕರಣಗಳು ಹಾಗೂ ನಗದು ಸಂಪೂರ್ಣವಾಗಿ ಹಾನಿಗೊಳಗಾದಿವೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಈ ಕಟ್ಟಡದಲ್ಲಿ ದಶಕಗಳಿಂದ ವ್ಯಾಪಾರ ನಡೆಸಿಕೊಂಡು ಬಂದ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರ ಬದುಕಿಗೆ ಈ ಅಗ್ನಿ ಅವಘಡ ದೊಡ್ಡ ಹೊಡೆತ ನೀಡಿದೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ತನಿಖೆ ಕೈಗೊಂಡಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
