ತುಳು ಭಾಷೆ ಸಂಸ್ಕೃತಿ ಉತ್ತೇಜನಕ್ಕೆ ಎಲ್ಲರ ಪ್ರಯತ್ನ ಅಗತ್ಯ: ಕಿಶೋರ್ ಆಳ್ವ

ತುಳು ಭಾಷೆ ಸಂಸ್ಕೃತಿ ಉತ್ತೇಜನಕ್ಕೆ ಎಲ್ಲರ ಪ್ರಯತ್ನ ಅಗತ್ಯ: ಕಿಶೋರ್ ಆಳ್ವ


ಮಂಗಳೂರು: ಪುರಾತನ ಹಿನ್ನೆಲೆ ಹೊಂದಿರುವ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ಸರಕಾರ,  ಸಮುದಾಯ ಹಾಗೂ ಖಾಸಗಿ ರಂಗ ಜೊತೆಯಾಗಿ  ಕೈಜೋಡಿಸಬೇಕಾಗಿದೆ ಎಂದು ಅದಾನಿ ಸಂಸ್ಥೆಯ  ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಹೇಳಿದರು. 

ಅವರು ಮಂಗಳೂರಿನ ತುಳು ಭವನದಲ್ಲಿ 'ಎಸ್.ಯು. ಪಣಿಯಾಡಿ ತುಳುನಾಡ ಚಾವಡಿ'ಯಲ್ಲಿ ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ  ಹಳೆಯ ಮಂಗಳೂರಿನ   ಛಾಯಾಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು. 


ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ದೃಶ್ಯ ರೂಪಕಗಳನ್ನು ತುಳು ಅಕಾಡೆಮಿಯ ಸಹಭಾಗಿತ್ವದಲ್ಲಿ ರೂಪಿಸುವ ಬಗ್ಗೆ  ಚಿಂತನೆ ನಡೆಸಲಾಗುವುದು  ಕಿಶೋರ್ ಆಳ್ವಾ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ತುಳು ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಮಾಹಿತಿ ಪಡೆಯಲು  ದೇಶ ವಿದೇಶದ ಜನರು ತುಂಬಾ ಆಸಕ್ತಿಯನ್ನು ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಕಿಶೋರ್ ಆಳ್ವಾ ಅವರು ಉಲ್ಲೇಖಿಸಿದರು. 

ಯಜ್ಞ ಅವರು ತನ್ನ ಕ್ಯಾಮರಾ ಕಣ್ಣಿನ ಮೂಲಕ ಹಳೆ ಕಾಲದ ಮಂಗಳೂರನ್ನು ದಾಖಲೀಕರಣ ಮಾಡಿರುವುದು  ಮಂಗಳೂರಿನ ಬಗ್ಗೆ ಚಾರಿತ್ರಿಕ ಒಳನೋಟವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಯಜ್ಞ ಅವರಿಗೆ ತುಳು ಸಾಹಿತ್ಯ ಅಕಾಡೆಮಿಯ 'ಚಾವಡಿ ತಮ್ಮನ' ನೀಡಿ ಗೌರವಿಸಲಾಯಿತು. 

ಹಿರಿಯ ಸಾಮಾಜಿಕ ಧುರೀಣ ಹಾಗೂ ಮುಡಿಪು ತುಳು ಸಿರಿ ಮ್ಯೂಸಿಯಂನ ಸ್ಥಾಪಕ ಡಾ. ಮದನ್  ಮೋಹನ ನಾಯಕ್ ಅವರು 'ಯು.ಎಸ್. ಪಣಿಯಾಡಿ ತುಳುನಾಡ ಚಾವಡಿ' ನಾಮಫಲಕವನ್ನು ಅನಾವರಣ ಮಾಡಿದರು. 

ಆರ್ಟ್ ಕೆನರಾ ಟ್ರಸ್ಟ್ ನ ಅಧ್ಯಕ್ಷ  ಸುಭಾಷ್ ಚಂದ್ರ ಬಸು ಅವರು ಯಜ್ಞ ಅವರ ಹಳೆ ಕಾಲದ ಕಪ್ಪು ಬಿಳುಪು ಛಾಯಾಚಿತ್ರಗಳ ಮಹತ್ವದ ಬಗ್ಗೆ ಮಾತನಾಡಿದರು. 

ಹಿರಿಯ  ಪತ್ರಕರ್ತೆ ಅನಿತಾ ಪಿಂಟೋ ಅವರು ಮಾತನಾಡಿ,  ತಾನು ತರಂಗ ವಾರಪತ್ರಿಕೆ ಮೂಲಕ  ಪತ್ರಕರ್ತೆಯಾಗಿ ಬೆಳೆಯಲು ಯಜ್ಞ ಅವರ ಛಾಯಾಚಿತ್ರಗಳು  ಮಹತ್ವದ  ಕೊಡುಗೆಯಾಗಿತ್ತು ಎಂದು ನೆನಪಿಸಿಕೊಂಡರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಯು. ಪಣಿಯಾಡಿ ತುಳುನಾಡ ಚಾವಡಿಯಲ್ಲಿ ತುಳು ಸಂಸ್ಕೃತಿಯ ವಿವಿಧ ಸರಣಿಯ ಛಾಯಾ ಚಿತ್ರಗಳ ಅಳವಡಿಕೆ ಮುಂದುವರಿಯಲಿದೆ ಎಂದು ತಾರಾನಾಥ ಗಟ್ಟಿ ಅವರು ತಿಳಿಸಿದರು. 

ಸಮಾರಂಭದಲ್ಲಿ ಕಟ್ಟೆಮಾರ್ ಮನೆತನದ ಪ್ರಶಾಂತ್ ಕುಮಾರ್ ಕಟ್ಟೆಮಾರ್, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ತುಳು ಅಕಾಡೆಮಿ ಸದಸ್ಯರಾದ ಬೂಬ ಪೂಜಾರಿ ಮಳಲಿ, ಬಾಬು ಕೊರಗ ಪಾಂಗಾಳ ಉಪಸ್ಥಿತರಿದ್ದರು.

ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು,  ಕಾರ್ಯಕ್ರಮದ ಸದಸ್ಯ ಸಂಚಾಲಕ ಅಕಾಡೆಮಿ ಸದಸ್ಯ  ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು, ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article