ಮಂಗಳೂರು ಮಹಾನಗರ ಪಾಲಿಕೆ: 1200 ಕೋಟಿ ಒಳಚರಂಡಿ ವ್ಯವಸ್ಥೆ ಯೋಜನೆ

ಮಂಗಳೂರು ಮಹಾನಗರ ಪಾಲಿಕೆ: 1200 ಕೋಟಿ ಒಳಚರಂಡಿ ವ್ಯವಸ್ಥೆ ಯೋಜನೆ


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಕಾಡುತ್ತಿರುವ ಒಳಚರಂಡಿ ವ್ಯವಸ್ಥೆ (ಮನೆ, ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಹರಿಯುವ)ಯನ್ನು ಸಮರ್ಪಕಗೊಳಿಸಲು 1200 ಕೋಟಿರೂ.ಗಳ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. 

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿಯವರು ಇಂದು ಮನಪಾ ಮೇಯರ್ ಕೊಠಡಿಯಲ್ಲಿ ಫೋನ್ ಇನ್ ಮೂಲಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. 

ಮಳೆ ನೀರು ಹರಿಯುವ ಚರಂಡಿಗಳಲ್ಲಿ ಅಪಾರ್ಟ್ಮೆಂಟ್, ಮನೆಗಳ ಕೊಳಚೆ ನೀರು ಹರಿಯುತ್ತಿರುವುದು, ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವ ಸಮಸ್ಯೆಗಳ ಕುರಿತಂತೆ ಹಲವು ಸಾರ್ವಜನಿಕರು ಫೋನ್ ಕರೆಗಳ ಮೂಲಕ ದೂರು ನೀಡಿದರು. 

ಅಪಾರ್ಟ್ಮೆಂಟ್ಗಳ ನಿರ್ಮಾಣದ ಸಂದರ್ಭ ಪ್ರತ್ಯೇಕ ಎಸ್ಟಿಪಿಗಳನ್ನು ನಿರ್ವಹಿಸುವ ನಿಯಮ ಜಾರಿಯಲ್ಲಿದೆ. ಆದರೆ ಹಳೆ ಅಪಾರ್ಟ್ಮೆಂಟ್ಗಳಲ್ಲಿ ಈ ವ್ಯವಸ್ಥೆ ಇಲ್ಲ. ಹೊಸ ಅಪಾರ್ಟ್ಮೆಂಟ್ಗಳಲ್ಲಿ ಎಸ್ಟಿಪಿಗಳು ಕಾರ್ಯ ನಿರ್ವಹಿಸದೆ ಸಮಸ್ಯೆಯಾಗಿರುವುದು ಕಂಡು ಬಂದಿದೆ. ಹಾಗಾಗಿ ನಗರದ ಸಮಗ್ರ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಮುಂದಿನ ಆರು ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಯುಜಿಡಿ ಪ್ಲಾನ್ ಸಿದ್ಧವಾಗಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿಸಚಿವರು ಸಭೆ ನಡೆಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜತೆಗೂ ಚರ್ಚೆಯಾಗಿದೆ. ಮುಂದಿನ ಬಜೆಟ್ನಲ್ಲಿ ಈ ಯೋಜನೆಯನ್ನು ಮಂಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. 

ರಾಮಯ್ಯ ಎಂಬವರು ಕರೆ ಮಾಡಿ, ತಮ್ಮ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳು (9 ನಂಬ್ರ ಬಸ್) ಬೆಳಗ್ಗೆ ಮತ್ತು ರಾತ್ರಿ ಹೊತ್ತು ಟ್ರಿಪ್ ಕಟ್ ಮಾಡುತ್ತಿವೆ. ಹಿಂದೆ ಇಲ್ಲಿ ಸಂಚರಿಸುತ್ತಿದ್ದ್ದ ಕೆಎಸ್‌ಆರ್ಟಿಸಿ ಬಸ್ಸು ಸೇವೆಯೂ ಸ್ಥಗಿತಗೊಂಡಿದೆ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಂಗಳೂರು ನಗರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 100 ಇಲೆಕ್ಟ್ರಿಕ್ ಸರಕಾರಿ ಬಸ್ಸುಗಳು ಮಂಜೂರಾಗಿವೆ ಎಂದರು. 

ಬಸ್ಸುಗಳ ಪೂರೈಕೆಗೆ ಟೆಂಡರ್ ಆಗಿದ್ದು, ಮುಂದಿನ ಮಾರ್ಚ್ನೊಳಗೆ ಶೇ. 50ರಷ್ಟು ಬಸ್ಸುಗಳು ಪ್ರಥಮ ಹಂತದಲ್ಲಿ ನಗರಕ್ಕೆ ಬರಲಿದ್ದು, ಬಳಿಕ ಮತ್ತೆ 3 ತಿಂಗಳೊಳಗೆ ಎರಡನೆ ಹಂತದಲ್ಲಿ ಇನ್ನುಳಿದ ಬಸ್ಸುಗಳು ಪೂರೈಕೆಯಾಗಲಿವೆ. ಇವುಗಳ ನಿಲುಗಡೆಗೆ ಮುಡಿಪು ಸೇರಿ ಎರಡು ಕಡೆ ನಗರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚುವರಿ ಬಸ್ಸು ಚಾಲಕರ ನೇಮಕಾತಿಯೂ ನಡೆದಿದ್ದು, ತರಬೇತಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 30 ಕರೆಗಳು ಸ್ವೀಕೃತವಾಗಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು. 

ಶೈಕ್ಷಣಿಕ ದಾಖಲೆ ಪತ್ರಕ್ಕೆ ಬೇಡಿಕೆ..

ಉತ್ತಮ ಅಂಕಗಳನ್ನು ಪಡೆದಿದ್ದ ನನ್ನ ಮಗಳನ್ನು ಬಿಎಸ್ಸಿ ನರ್ಸಿಂಗ್ ಓದಿಸಲು ನಗರದ ಖಾಸಗಿ ಕಾಲೇಜಿಗೆ ದಾಖಲು ಮಾಡಲಾಗಿತ್ತು. ಶುಲ್ಕವನ್ನು ಭರಿಸಲಾಗಿತ್ತು. ಈ ನಡುವೆ ಸರಕಾರಿ ಕೋಟದಡಿ ಆಕೆಗೆ ಸೀಟು ಲಭ್ಯವಾದ ಹಿನ್ನೆಲೆಯಲ್ಲಿ ಆಕೆಯ ಕಾಲೇಜು ಬದಲಾಯಿಸಲಾಯಿತು. ಆದರೆ ಈ ಮೊದಲು ದಾಖಲಾಗಿದ್ದ ಖಾಸಗಿ ಕಾಲೇಜಿನವರು ಆಕೆಯ ಶೈಕ್ಷಣಿಕ ದಾಖಲಾತಿ ಮೂಲಪ್ರತಿಯನ್ನು ಹಿಂತಿರುಗಿಸುತ್ತಿಲ್ಲ. ಕಟ್ಟಿದ ಹಣ ಬೇಡ. ಕನಿಷ್ಟ ಮೂಲ ದಾಖಲೆ ನೀಡುವಂತೆ ಕಳೆದ ನಾಲ್ಕೈದು ತಿಂಗಳಿನಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸಿಲ್ಲ. ಇದಕ್ಕೊಂದು ನ್ಯಾಯ ಕೊಡಿ ಎಂದು ಕೊಟ್ಟಾರ ಚೌಕಿಯಿಂದ ಕರೆ ಮಾಡಿದ ಮಹಿಳೆಯೊಬ್ಬರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

‘ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಾಯಿಗಳ ಗಣತಿ ಆಧಾರದಲ್ಲಿ ಅವುಗಳಿಗೆ ಸ್ಥಳೀಯವಾಗಿ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಕ್ರಮಗಳು ನಡೆಯುತ್ತಿವೆ. ನಗರದ ನೀರುಮಾರ್ಗ ಹಾಗೂ ಬೊಂಡಂತಿಲ ಬಳಿ ಜಾಗಗಳನ್ನು ಪರಿಶೀಲಿಸಲಾಗಿದೆ. ಪುನರ್ವಸತಿ ಕಲ್ಪಿಸಲು ಕನಿಷ್ಟ 10 ಎಕರೆ ಜಾಗದ ಅಗತ್ಯವಿದೆ. ಮೊದಲ ಹಂತದಲ್ಲಿ ಮಂಗಳೂರು, ಮುಲ್ಕಿ, ಉಳ್ಳಾಲ ವ್ಯಾಪ್ತಿಯಲ್ಲಿ ಜಾಗವನ್ನು ಗುರುತಿಸಲಾಗುತ್ತಿದೆ. ಎರಡನೆ ಹಂತದಲ್ಲಿ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣದಲ್ಲಿಯೂ ಜಾಗ ಗುರುತಿಸಿ ಅಗತ್ಯ ಅನುದಾನಕ್ಕೆ ಸರಕಾರವನ್ನು ಕೋರಲಾಗುವುದು’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಹಾಗೂ ಪಾಲಿಕೆಯ ಇತರ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article