ಜ.9ರಿಂದ ಮಂಗಳೂರು ಟ್ರಯತ್ಲಾನ್
ಮಂಗಳೂರು: ಕರಾವಳಿ ಉತ್ಸವ 2025 ರ ಆಯೋಜನೆ ಅಂಗವಾಗಿ ತಣ್ಣೀರುಬಾವಿ ಕಡಲ ತೀರದಲ್ಲಿ ಜನವರಿ 9 ರಿಂದ 11 ರವರೆಗೆ ತಪಸ್ಯಾ ಫೌಂಡೇಶನ್ ಸಹಯೋಗದಲ್ಲಿ ಟ್ರಯತ್ಲಾನ್ ಚಟುಚಟಿಕೆಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳು ಸೂಕ್ತ ರೀತಿ ಕಾರ್ಯನಿರ್ವಹಿಸುವಂತೆ ಸಹಕರಿಸಬೇಕು. ಸೈಕ್ಲಿಂಗ್, ಮ್ಯಾರಥಾನ್‌ನಲ್ಲಿ ಅನೇಕ ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾಪಟುಗಳಿಗೆ ಯಾವುದೇ ತೊಂದರೆಯಾಗದಂತೆ ರಸ್ತೆಗಳಲ್ಲಿರುವ ಹೊಂಡ ಗುಂಡಿಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಕ್ತ ರೀತಿಯಲ್ಲಿ ಬೀದಿ ದೀಪದ ವ್ಯವಸ್ಥೆಯನ್ನು ಮಾಡಬೇಕು ಎಂದು ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಸೂಚಿಸಿದರು.
ಅವರು ಬುಧವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಟ್ರಯತ್ಲಾನ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಕ್ರೀಡೆ, ಗ್ರಾಮೀಣ ಮತ್ತು ಕೃಷಿ-ತಂತ್ರಜ್ಞಾನ ನಾವೀನ್ಯತೆ, ಸಾಂಸ್ಕೃತಿಕ ಕಲೆಗಳು, ಯುವ ಪ್ರತಿಭಾ ವೇದಿಕೆಗಳು ಮತ್ತು ಸಮುದಾಯ-ಚಾಲಿತ ಅನುಭವಗಳನ್ನು ಸಂಯೋಜಿಸುವ ಈ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ, ಕಲಾವಿದರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜ.9 ರಂದು ರಾಷ್ಟ್ರೀಯ ಓಪನ್ ವಾಟರ್ ಈಜು ಚಾಂಪಿಯನ್ಶಿಪ್ನೊಂದಿಗೆ ಉತ್ಸವವು ಪ್ರಾರಂಭವಾಗುತ್ತದೆ. ಮೊದಲ ದಿನವು ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, 20-30 ಮಳಿಗೆಗಳನ್ನು ಹೊಂದಿರುವ ಕೃಷಿ ತಂತ್ರಜ್ಞಾನ ಪ್ರದರ್ಶನ ಮತ್ತು ಬೀಚ್ ಕುಸ್ತಿ ಸ್ಪರ್ಧೆಗಳನ್ನು ಒಳಗೊಂಡಿದೆ. ಜನವರಿ 10 ರಂದು ಸೈಕ್ಲಿಂಗ್, ಡ್ಯುಯಥ್ಲಾನ್, ಬೀಚ್ ಕುಸ್ತಿ ಮತ್ತು ಬೈಕ್ ಸ್ಟಂಟ್ ಶೋ ಮತ್ತು ನೃತ್ಯ ಸ್ಪರ್ಧೆಗಳು ನಡೆಯಲಿದೆ. ಜನವರಿ ೧೧ ರಂದು ಮಂಗಳೂರು ಟ್ರಯಥ್ಲಾನ್ ಮತ್ತು ಮ್ಯಾರಥಾನ್ ಸ್ಪರ್ಧೆಗಳ ನಂತರ ಕಲಾ ಸ್ಪರ್ಧೆ ಮತ್ತು ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಷನ್ ಶೋ ಪ್ರದರ್ಶನ ನಡೆಯಲಿದೆ ಎಂದು ತಪಸ್ಯಾ ಫೌಂಡೇಶನ್ ಪ್ರತಿನಿಧಿ ಸಭೆಗೆ ಮಾಹಿತಿ ನೀಡಿದರು.
ವಿವಿಧ ಇಲಾಖಾಧಿಕಾರಿಗಳು ಇದ್ದರು.