ರಿಷಬ್ ಹರಕೆಯ ಕೋಲ ವಿವಾದ: ದೈವಸ್ಥಾನದ ಪ್ರಮುಖರ ಸ್ಪಷ್ಟೀಕರಣ

ರಿಷಬ್ ಹರಕೆಯ ಕೋಲ ವಿವಾದ: ದೈವಸ್ಥಾನದ ಪ್ರಮುಖರ ಸ್ಪಷ್ಟೀಕರಣ

ಮಂಗಳೂರು: ಕಾಂತಾರಾ ಚಾಪ್ಟರ್-1 ಸಿನೆಮಾ ಯಶಸ್ವಿಗೆ ಬಾರೆಬೈಲ್ ಜಾರಂದಾಯ, ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ಹೊಂಬಾಳೆ ಫಿಲಂಸ್ ಹಾಗೂ ನಟ ರಿಷಬ್ ಶೆಟ್ಟಿ ವತಿಯಿಂದ ಸಲ್ಲಿಸಿದ್ದ ಹರಕೆಯ ಕೋಲ ಸಂದರ್ಭ ಎಣ್ಣೆಬೂಳ್ಯ ವಿಡಿಯೋ ವೈರಲ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರವಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಅರಸು ಧರ್ಮ ಜಾರಂದಾಯ ಬಂಟ ಮತ್ತು ವಾರಾಹಿ ದೈವಸ್ಥಾನದ ಪ್ರಮುಖರು ಊರ ಗ್ರಾಮಸ್ಥರು, ದೈವ ಪರಿಚಾರಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ. 

ದೈವಸ್ಥಾನದ ಗೌರವಾಧ್ಯಕ್ಷ ರವಿಪ್ರಸನ್ನ ಸಿ.ಕೆ. ಮಾತನಾಡಿ, ದೈವದ ಕಟ್ಟುಕಟ್ಟಳೆಯಲ್ಲಿ ಯಾವುದೇ ಲೋಪ ಗೊಂದಲ ಆಗಿಲ್ಲ. ನರ್ತಕನ ಮೇಲೆ ನಮಗೆ ಸಂಶಯವಿರುವುದಾಗಿ ಕೆಲವರು ಮಾಧ್ಯಮಗಳಲ್ಲಿ ಹೇಳಿದ್ದಾರೆಯೇ ಹೊರತು ನಮ್ಮ ಕ್ಷೇತ್ರದಲ್ಲಿ ಬಂದು ಹೇಳಿಲ್ಲ. ನಾವು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡುವ ಉದ್ದೇಶದಲ್ಲಿಯೇ ಇರಲಿಲ್ಲ, ಆದರೆ ದೈವವೇ ಅನುಮತಿ ಕೊಟ್ಟ ಬಳಿಕವೇ ಈ ಸ್ಪಷ್ಟೀಕರಣ ನೀಡಬೇಕಾಯಿತು. ದೇವಸ್ಥಾನದ ಚಿನ್ನ ಕದ್ದವರು ದೈವಗಳ ಬಗ್ಗೆ ಮಾತಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕಳೆದ ಬಾರಿ ನಡೆದಿದ್ದ ನೇಮದ ಸಂದರ್ಭ ರಿಷಬ್ ಶೆಟ್ಟಿ ತನ್ನ ಮಗನ ಹುಟ್ಟು ಹಬ್ಬ ಇದೆ ಎಂದು ಪ್ರಸಾದ ತೆಗೆದುಕೊಂಡು ಹೋಗಿದ್ದು, ಈ ಬಾರಿ ಹರಕೆಯ ನೇಮ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದರು. ದೀಪೋತ್ಸವದ ಸಂದರ್ಭ ಜಾರಂದಯಾ ದೈವ ಒಳ್ಳೆ ಪುಷ್ಪ ಕೊಟ್ಟು, ಅನುಮತಿ ನೀಡಿತ್ತು. ಹೀಗಾಗಿ ರಿಷಬ್ ಶೆಟ್ಟಿ ಹರಕೆಯ ನೇಮ ಸಲ್ಲಿಸಿದ್ದಾರೆ ಎಂದರು.

ವಾರಾಹಿ ಪಂಜುರ್ಲಿ ಇಲ್ಲಿನ ಬ್ರಾಹ್ಮಣ ಸಮುದಾಯದವರು ಆರಾಧಿಸಿಕೊಂಡು ಬಂದ ದೈವವಾಗಿದ್ದು, ಜಾರಂದಾಯ ರಾಜನ್ ದೈವವಾಗಿದೆ. ಅದರೊಂದಿಗೆ ರಕ್ತೇಶ್ವರಿ ದೈವವೂ ಇದೆ. ಇಲ್ಲಿ ದೈವಗಳಿಗೆ ವಾರ್ಷಿಕ ನೇಮ ನಡೆಯುತ್ತಿದೆ. ಆದರೆ ವಾರಾಹಿ ಪಂಜುರ್ಲಿಗೆ ಹರಕೆಯ ನೇಮ ಸಲ್ಲಿಸಬಹುದೆಂದು ಸ್ವತಃ ದೈವವೇ ಅನುಮತಿ ಕೊಟ್ಟಿದೆ. ಮುಂದಿನ ಫೆಬ್ರವರಿಯಲ್ಲೂ ೭-೮ ಮಂದಿ ನೇಮ ಹರಕೆ ಹೇಳಿದ್ದಾರೆ ಎಂದರು.

ವಾರಾಹಿ ಅಂದರೇನು ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಿಟ್ಟಾದ ರವಿಪ್ರಸನ್ನ ಅದು ನಮಗೆ ಗೊತ್ತಿಲ್ಲ, ಹಿಂದಿನಿಂದಲೂ ಆ ಹೆಸರಿನಿಂದ ಕರೆದುಕೊಂಡು ಬರಲಾಗುತ್ತಿದೆ. ಈ ಬಗ್ಗೆ ನೀವು ದೈವದಲ್ಲಿಯೇ ಕೇಳಬೇಕು. ಮುಂದಿನ ಬಾರಿ ನೇಮ ನಡೆಯುವಾಗ ನೀವು ಬನ್ನಿ. ಪಂಜುರ್ಲಿಗೆ ಹಲವಾರು ಹೆಸರುಗಳಿದ್ದು, ಅದರಲ್ಲಿ ಇದೂ ಒಂದು ಆಗಿರಬಹುದು. ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು. ನಮಗೆ ದೈವ ನರ್ತಕ, ಪೂಜಾರಿ, ನಮ್ಮ ಮೇಲೆ, ದೈವದ ಮೇಲೆ ಸಂಶಯವಿಲ್ಲ. ನಂಬಿಕೆ ಫಲಿಸುತ್ತದೆ ಎಂಬ ಉದ್ದೇಶದಿಂದ ಆರಾಧನೆ ನಡೆಯುತ್ತಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ಕಟ್ಟುಕಟ್ಟಳೆ ಇದ್ದು, ನಮ್ಮ ಕಟ್ಟುಕಟ್ಟಳೆ ನಮ್ಮ ಕ್ಷೇತ್ರಕ್ಕೆ ಮಾತ್ರ ಸೀಮತ ಎಂದು ಹೇಳಿದರು.

ಎಣ್ಣೆ ಬೂಳ್ಯದ ಸಂದರ್ಭ ದೈವ ಉಗ್ರ ಆವೇಶದಲ್ಲಿತ್ತು. ನಾವು ದೈವ ಕಟ್ಟುವವರಿಗೆ ಹೀಗೆಯೇ ಮಾಡು ಎಂದು  ಹೇಳಿಕೊಡುವಂತಿಲ್ಲ. ರಿಷಬ್ ಶೆಟ್ಟಿ ವಿಚಾರದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರೇ ಹರಕೆ ಕೊಡಲಿ ಅವರ ಮೇಲೆ ಪ್ರೀತಿಯಿಂದ ಆ ರೀತಿ ಮಾಡುವುದು ಸಹಜ. ಬೇರೆ ಯಾರಾದರೂ ಹರಕೆ ಕೊಟ್ಟರೂ ದೈವ ಹಾಗೆಯೇ ಮಾಡುತ್ತದೆ. ಕೆಲವು ಕಡೆಗಳಲ್ಲಿ ದೈವ ಇದಕ್ಕಿಂತಲೂ ಉಗ್ರವಾಗಿರುತ್ತದೆ. ಅದು ಆಯಾಯ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರ. ಸಾಮಾಜಿಕ ಮಾಧ್ಯಮಗಳಲ್ಲಿ  ಕೆಟ್ಟದಾಗಿ ಕಮೆಂಟ್ ಹಾಕಲಾಗುತ್ತದೆ. ಮುಸ್ಲಿಂ, ಕ್ರೈಸ್ತರು ಕೆಟ್ಟದಾಗಿ ಕಮೆಂಟ್ ಹಾಕುತ್ತಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆ, ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ದೈವ ಅನುಮತಿ ಕೊಟ್ಟರೆ ಅಂತವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದರು.

ತಮ್ಮಣ್ಣ ಶೆಟ್ಟಿಯವರು ಬಾರೆಬೈಲ್ ವಿಚಾರವಾಗಿ ಮಾಧ್ಯಮಗಳಲ್ಲಿ ಮಾತನಾಡಿರುವ ಬಗ್ಗೆ ಪ್ರತಿಕ್ರಯಿಸಿದ ಅವರು, ಮುಂಬೈಯಲ್ಲಿ ಅವರು ದೈವ ನರ್ತನ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಕೃಷ್ಣ ಭಟ್ ಕದ್ರಿ, ಕಾರ್ಯದರ್ಶಿ ಚರಣ್ ಕುಮಾರ್, ಉಪಾಧ್ಯಕ್ಷ ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article