ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್: ಉಡುಪಿ ಪೊಲೀಸ್ ಇಲಾಖೆಗೆ ಬೊಲೆರೊ ವಾಹನ ಹಸ್ತಾಂತರ
ಬನ್ನಂಜೆಯ ಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೊಸ ಬೊಲೆರೊ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.
ಆ ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರಿಗೆ ವಾಹನದ ಕೀಲಿ ಕೈಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ಅತ್ಯಂತ ಕಷ್ಟಕರ ಮತ್ತು ಕ್ಲಿಷ್ಟಕರವಾಗಿ ಕೆಲಸ ನಿರ್ವಹಿಸುವ ಇಲಾಖೆಯಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ. ಪೊಲೀಸ್ ಇಲಾಖೆಗೆ ವಾಹನದ ಅಗತ್ಯವನ್ನು ಮನಗಂಡು ಬೊಲೆರೊ ವಾಹನವನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.
ಪೊಲೀಸ್ ಇಲಾಖೆ ಬಹಳಷ್ಟು ಸವಾಲುಗಳಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ದೊಡ್ಡ ಜವಾಬ್ದಾರಿ. ಇಲಾಖೆಗೆ ವಾಹನ ನೀಡುವಂತೆ ಮನವಿ ಬಂದಾಗ ಬ್ಯಾಂಕ್ ತಕ್ಷಣವೇ ಸ್ಪಂದಿಸಿ ವಾಹನವನ್ನು ಒದಗಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಈಗಾಗಲೇ 2 ವಾಹನಗಳನ್ನು ನೀಡಿದ್ದೇವೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಪೊಲೀಸ್ ಇಲಾಖೆಯ ಹಲವು ವಾಹನಗಳು 15 ವರ್ಷವನ್ನು ಪೂರೈಸಿದ್ದು, ಕೆಲ ವಾಹನಗಳು ದುರಸ್ತಿಯಲ್ಲಿ ಇರುವುದರಿಂದ ಇಲಾಖೆಗೆ ಕರ್ತವ್ಯ ನಿರ್ವಹಿಸಲು ಸಮಸ್ಯೆ ಆಗುತ್ತಿತ್ತು. ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ವಾಹನ ಒದಗಿಸಲು ಇಲಾಖೆ ಮನವಿ ಸಲ್ಲಿಸಲಾಗಿತ್ತು. ಇಲಾಖೆಯ ಮನವಿಗೆ ಸ್ಪಂದಿಸಿದ ಬ್ಯಾಂಕ್ ಬೊಲೆರೊ ವಾಹನವನ್ನು ನೀಡಿದೆ. ಬ್ಯಾಂಕ್‌ನ ಉದಾತ್ತ ದೇಣಿಗೆಗೆ ಜಿಲ್ಲಾ ಪೊಲೀಸ್ ಇಲಾಖೆ ಧನ್ಯವಾದ ಸಲ್ಲಿಸುತ್ತದೆ ಎಂದರು.
ಪೊಲೀಸ್ ಇಲಾಖೆಯಿಂದ ಸನ್ಮಾನ:
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ವಾಹನವನ್ನು ನೀಡಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್‌ನ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರನ್ನು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಗೌರವಿಸಿದರು.
ಬ್ಯಾಂಕ್‌ನ ನಿರ್ದೇಶಕರಾದ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಉಪಸ್ಥಿತರಿದ್ದರು.
2 ಲಕ್ಷ ದೇಣಿಗೆ:
ಉಡುಪಿ ರನ್ನರ್ ಕ್ಲಬ್‌ನ ವತಿಯಿಂದ ಆಯೋಜಿಸಿರುವ ಉಡುಪಿ ಮ್ಯಾರಾಥಾನ್-2025ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ವತಿಯಿಂದ 2 ಲಕ್ಷ ರೂ. ಸಹಾಯಧನದ ಚೆಕ್‌ಯನ್ನು ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹಸ್ತಾಂತರಿಸಿದರು.