ಮನಪಾ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಶಾಸಕ ಕಾಮತ್ ಸಭೆ
Wednesday, December 24, 2025
ಮಂಗಳೂರು: ಮ.ನ.ಪಾ ವ್ಯಾಪ್ತಿಯ ಕೆಲವೆಡೆ ಕಳೆದ ಮಳೆಗಾಲದಲ್ಲಿ ರಾಜಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದನ್ನು ಗಮನದಲ್ಲಿಟ್ಟುಕೊಂಡು ನೆರೆ ಪರಿಸ್ಥಿತಿಗೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಮುಂಜಾಗ್ರತಾ ಕ್ರಮವಹಿಸುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳ, ಸ್ಥಳೀಯರ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು, ಅತ್ತಾವರ ಕೆಎಂಸಿ, 5ನೇ ಅಡ್ಡ ರಸ್ತೆಯ ಟೆಲಿಕಾಂ ಅಪಾರ್ಟ್‌ಮೆಂಟ್, ಪಾಂಡೇಶ್ವರ, ಶಿವನಗರ ಮೊದಲಾದ ಭಾಗಗಳಲ್ಲಿ ಕಳೆದ ಮಳೆಗಾಲದಲ್ಲಿ ರಾಜಕಾಲುವೆಯ ನೀರು ನುಗ್ಗಿತ್ತು. ಹಲವು ಪ್ರದೇಶಗಳು ಈ ಹಿಂದೆ ಗದ್ದೆ ಪ್ರದೇಶಗಳಾಗಿದ್ದು, ಇದೀಗ ಅಲ್ಲಿ ಅತೀ ಹೆಚ್ಚು ಮನೆ ನಿರ್ಮಾಣಗೊಂಡಿರುವುದರಿಂದ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿದೆ ಎಂದು ಸ್ಥಳೀಯರೇ ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪಾಲಿಕೆ ಅಧಿಕಾರಿಗಳು ಇಲ್ಲಿನ ಸ್ಥಳೀಯರ ಅಭಿಪ್ರಾಯಕ್ಕೆ ಪ್ರಥಮ ಆದ್ಯತೆ ನೀಡಿ ಸಮಗ್ರ ಯೋಜನೆ ಸಿದ್ದಪಡಿಸುವಂತೆ ಶಾಸಕರು ಸೂಚನೆ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 75 ಕೋಟಿ ವಿಶೇಷ ಅನುದಾನದ ಮೂಲಕ ಕ್ಷೇತ್ರದ ಹಲವು ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಮಾಡಿದ್ದರಿಂದ ಕಳೆದ ಮಳೆಗಾಲದಲ್ಲಿ ಹೆಚ್ಚಿನ ಹಾನಿಯಾಗುವುದು ತಪ್ಪಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರಕ್ಕೆ ಬಿಡಿಗಾಸು ದೊರೆತಿಲ್ಲ, ಹೀಗಾಗಿ ಸಣ್ಣಪುಟ್ಟ ತುರ್ತುಕ್ರಮಕ್ಕೂ ಹಿನ್ನಡೆಯಾಗಿದೆ. ಆದರೂ ಕೂಡಲೇ ಜಿಲ್ಲಾಧಿಕಾರಿಗಳ ಸಹಿತ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದರು. ಮಾಜಿ ಮೇಯರ್ ಗಳಾದ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಕಾರ್ಯಪಾಲಕ ಎಂಜಿನಿಯರ್ ಹಾಗೂ ಪಾಲಿಕೆಯ ಉಪ ಆಯುಕ್ತರಾದ (ಅಭಿವೃದ್ಧಿ) ನರೇಶ್ ಶೆಣೈ, AEE ರಾಜೇಶ್, ಪಾಲಿಕೆ ಇಂಜಿನಿಯರ್ ಗಳು, ಬಿಜೆಪಿ ಪ್ರಮುಖರಾದ ಲಲ್ಲೇಶ್ ಕುಮಾರ್, ಭರತ್ ಕುಮಾರ್ ಉಪಸ್ಥಿತರಿದ್ದರು
