ಕನಕದಾಸರಿಂದ ಉಡುಪಿಯ ಕಿಂಡಿ ಪ್ರಸಂಗದ ಮೂಲಕ ಆಧ್ಯಾತ್ಮಿಕ ಸಮಾನತೆಯ ಆಶಯ: ಡಾ.ನರೇಂದ್ರ ರೈ ದೇರ್ಲ

ಕನಕದಾಸರಿಂದ ಉಡುಪಿಯ ಕಿಂಡಿ ಪ್ರಸಂಗದ ಮೂಲಕ ಆಧ್ಯಾತ್ಮಿಕ ಸಮಾನತೆಯ ಆಶಯ: ಡಾ.ನರೇಂದ್ರ ರೈ ದೇರ್ಲ


ಮಂಗಳೂರು: ಕನಕದಾಸರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳು ನೆಲದಲ್ಲೇ ನಿಂತು ಇಡೀ ಸಮಾಜವನ್ನು ಸಾಮಾಜಿಕ, ಸಮಾನತೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಏರಿಸಿದ ಸಂತರು. ಇವರು ಭಾರತದ ಬಹುತ್ವ ಮತ್ತು ಬಂಧುತ್ವದ ಮಹತ್ವವನ್ನು ಸಾರಿದ ಮಹನೀಯರು ಎಂದು ಲೇಖಕ ಡಾ.ನರೇಂದ್ರ ರೈ ದೇರ್ಲ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಹಾಗೂ ಮಂಗಳೂರಿನ ಗಾಂಧಿನಗರದ ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜು ಇವರ ಸಹಯೋಗದೊಂದಿಗೆ ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ ಭಾರತೀಯ ಸಂತ ಪರಂಪರೆ ಮತ್ತು ಕನಕದಾಸರು ಎಂಬ ಕಾರ್ಯಕ್ರಮದಲ್ಲಿ ‘ಕನಕದಾಸರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 

ಬಾಳೆಹಣ್ಣು ಪ್ರಸಂಗದಲ್ಲಿ ದೇವರು ಸರ್ವಾಂತರ್ಯಾಮಿ ಎಂದು ತೋರಿಸಿಕೊಟ್ಟ ಕನಕದಾಸರು ಉಡುಪಿಯ ಕಿಂಡಿ ಪ್ರಸಂಗದ ಮೂಲಕ ಆಧ್ಯಾತ್ಮಿಕ ಸಮಾನತೆಯ ಆಶಯವನ್ನು ಸಾರಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ದೇವಸ್ಥಾನ ಪ್ರವೇಶ ದ್ವಾರದ ಎದುರು ಕನ್ನಡಿಯನ್ನಿಟ್ಟು ಭಗವಂತನನ್ನು ನೋಡುವ ಮೊದಲು ನಿನ್ನ ನೋಡುವಂತಾಗಬೇಕು. ನೀನೇನು ಅಂತ ತಿಳಿದರೆ ನಿನಗೆ ಜಗತ್ತು ಅರ್ಥವಾಗುತ್ತದೆ ಎಂಬ ಸಂದೇಶವನ್ನು ಸಾರಿದರು ಎಂದರು. 

ದೇವಸ್ಥಾನದ ಒಳಗಡೆ ಗ್ರಂಥಾಲಯಗಳನ್ನು ತೆರೆದ, ಉದ್ಯಾನವನಗಳನ್ನು ಸ್ಥಾಪಿಸಿದ ನಾರಾಯಣ ಗುರುಗಳ ಪ್ರಯೋಗಗಳು ಶಿಕ್ಷಣ ಮತ್ತು ಪ್ರಕೃತಿ ಮೇಲಿನ ಅವರ ಲೋಕದೃಷ್ಟಿಯನ್ನು ತೋರಿಸುತ್ತದೆ ಎಂದರು. 

ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಸಂತ ಕಾರಂದೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಅಧ್ಯಕ್ಷತೆ ವಹಿಸಿದ್ದ ಶ್ರೀಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಸಮಾನತೆ ಮತ್ತು ಮನುಷ್ಯತ್ವದ ಆಶಯಗಳನ್ನು ಇಬ್ಬರು ಸಂತರು ಹೊಂದಿದ್ದರು ಎಂದು ಹೇಳಿದರು. 

ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಒಳಿತು ಇರುವಂತೆ ಅಸಮಾನತೆಯನ್ನು ಸಾರುವ ಕೆಡುಕುಗಳು ಇವೆ. ಸಂತರು ಭಾರತದ ಅಧ್ಯಾತ್ಮಿಕ ಒಳಿತನ್ನು ಎತ್ತಿಹಿಡಿದು ಜಾತಿ, ಮೌಢ್ಯಗಳಂತಹ ಕೆಡುಕುಗಳ ವಿರುದ್ಧ ಹೋರಾಡಿದರು ಎಂದರು. 

ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ನಾಗೇಶ್ ಕರ್ಕೇರ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಾಧವ ಎಂ.ಕೆ. ಉಪಸ್ಥಿತರಿದ್ದರು. 

ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕಿ ಭಾರತಿ ಸ್ವಾಗತಿಸಿದರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ದ್ವಿತೀಯ ಎಂ.ಎ.ವಿದ್ಯಾರ್ಥಿ ದುಶ್ಯಂತ್ ವಂದಿಸಿದರು, ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯ ಯು. ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article