ಕುಮಾರಪಾದಕ್ಕೆ ಪೂಜೆ: ‘ಕುಮಾರಯಾತ್ರೆ’
ಕುಮಾರಪರ್ವತದ ತುತ್ತತುದಿಗೆ ಪ್ರಧಾನ ಅರ್ಚಕರು ಪಾದುಕೆ ಇಲ್ಲದೆ ಸುಮಾರು 10 ಕಿ.ಮೀ. ಕಾಲ್ನಡಿಗೆಯಲ್ಲಿ ಕಲ್ಲು, ಮುಳ್ಳಿನ ಹಾದಿಯಲ್ಲಿ ಸಾಗುತ್ತಾರೆ. ಕಾರ್ತಿಕ ಶುದ್ಧ ಷಷ್ಠಿ ದಿನ ಚಂಪಾಷಷ್ಠಿಯಂದು ಬ್ರಹ್ಮರಥೋತ್ಸವ ನಡೆದರೆ, ಮುಂದೆ ಬರುವ ಬಹುಳ ಷಷ್ಠಿ ದಿನ ಕುಮಾರಪರ್ವತದಲ್ಲಿ ಕುಮಾರಪಾದಗಳಿಗೆ ಮತ್ತು ವಾಸುಕಿ ಪೂಜೆ ಮತ್ತು ಅಭಿಷೇಕ ನೆರವೇರುತ್ತಾ ಬರುತ್ತಿರುವುದು ಸಂಪ್ರದಾಯ.
ಕುಕ್ಕೆ-ಕುಮಾರಪರ್ವತಕ್ಕೆ ಪವಿತ್ರ ಸಂಬಂಧ. ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದನು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ಈ ಪರ್ವತದಲ್ಲಿ ಚಂಪಾಷಷ್ಠಿ ದಿನ ದೇವೇಂದ್ರನ ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಕುಮಾರಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಇವೆ ಎನ್ನುವುದನ್ನು ಪುರಾಣಗಳು ಉಲ್ಲೇಖಿಸಿವೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗುತ್ತಿದೆ.
ಈಗಿನ ಪ್ರಧಾನ ಅರ್ಚಕ ವೇ.ಮೂ.ಸೀತಾರಾಮ ಯಡಪಡಿತ್ತಾಯ 2003ರಿಂದ ನಿರಂತರವಾಗಿ ಕುಮಾರಪರ್ವತಕ್ಕೆ ತೆರಳಿ ಪೂಜೆ ನೆರವೇರಿಸುತ್ತಾ ಬರುತ್ತಿದ್ದಾರೆ. ಈ ಹಿಂದೆ ಅರ್ಚಕರೇ ಸ್ವತಃ ಪರ್ವತದಲ್ಲಿ ಪೂಜೆಗೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ನಂತರ ಶ್ರೀ ದೇಗುಲದ ಆಡಳಿತ ಮಂಡಳಿಯು ಕುಮಾರಯಾತ್ರೆ ಎಂದು ನಾಮಕರಣ ಮಾಡಿ ಈ ಧಾರ್ಮಿಕ ಕಾರ್ಯವನ್ನು ನೆರವೇರಿಸಲು ಆರಂಭಿಸಿತು.