ವಾಟ್ಸ್‌ಆಪ್‌ನಲ್ಲಿ ಷೇರು ಹೂಡಿಕೆ: 31 ಲಕ್ಷ ವಂಚನೆ
ಮಂಗಳೂರು: ಹೋಮಿಯೋಪತಿ ಓದುತ್ತಿದ್ದ ಯುವಕನಿಗೆ ವಾಟ್ಸ್‌ಆಪ್‌ನಲ್ಲಿ ಷೇರು ಹೂಡಿಕೆಯಿಂದ ಹೆಚ್ಚು ಲಾಭ ಗಳಿಸಬಹುದು ಎನ್ನುವ ಆಮಿಷವೊಡ್ಡಿ 31.99 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವಿದ್ಯಾರ್ಥಿ, ಬಿಡುವಿನ ವೇಳೆಯಲ್ಲಿ ಪುರೋಹಿತರ ಸಹಾಯಕನಾಗಿ ಪೂಜೆ, ಹೋಮ ಹವನ ಮತ್ತು ಇನ್ನಿತರ ಕೆಲಸಕ್ಕೆ ಹೋಗುತ್ತಿದ್ದ. ಅದರ ಆದಾಯದ ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದ್ದ. ನವೆಂಬರ್ ತಿಂಗಳಲ್ಲಿ ವಾಟ್ಸ್‌ಆಪ್‌ನಲ್ಲಿ ಸಂದೇಶ ಬಂದಿದ್ದು ಅದರಲ್ಲಿ ಡಿಬಿಎಸ್ ಟ್ರೇಡಿಂಗ್ ಬಗ್ಗೆ ವಿವರಿಸಿ ಹಣ ಹೂಡಿಕೆ ಮಾಡಿದರೆ ಪ್ರತಿದಿನ ಶೇ.5 ರಿಂದ 10ರಷ್ಟು ಲಾಭಾಂಶ ಗಳಿಸಹುದು ಎಂದು ತಿಳಿಸಲಾಗಿತ್ತು. ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಡಿಸೆಂಬರ್ ಅಂತ್ಯದೊಳಗೆ ಶೇ.800 ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಇದರಿಂದ ಪ್ರೇರೇಪಿತರಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಹಣ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಚಿನ್ನ ಅಡವಿಟ್ಟು 31 ಲಕ್ಷ ರೂ. ಹೂಡಿಕೆ..
ಮೀನಾ ಭಟ್ ಎನ್ನುವ ಅಪರಿಚಿತ ಮಹಿಳೆ ಮಾರ್ಗದರ್ಶಕಿಯಾಗಿ ಪ್ರತಿದಿನ ನಿರಂತರವಾಗಿ ವಾಟ್ಸ್‌ಆಪ್‌ನಲ್ಲಿ ಸಂದೇಶ ಕಳುಹಿಸುತ್ತಾ ಹಣ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದಳು. ಅವರು ನೀಡಿದ ಬೇರೆ ಬೇರೆ ಖಾತೆಗಳಿಗೆ ನ.೫ರಿಂದ 26ರ ವರೆಗೆ ತನ್ನಲ್ಲಿದ್ದ ಹಣ ಹಾಗೂ ಮನೆಯಲ್ಲಿದ್ದ ಬಂಗಾರವನ್ನು ಅಡವಿಟ್ಟು ಹಂತ ಹಂತ ವಾಗಿ ಒಟ್ಟು 31,99,800 ರೂ. ಹಣ ವರ್ಗಾಯಿಸಿದ್ದಾರೆ.
ಅನಂತರದ ದಿನಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡುವಂತೆ ಕೇಳಿಕೊಂಡಾಗ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಹಾಗೂ ತೆರಿಗೆ ಇತರೆ ಶುಲ್ಕಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಯಾವುದೇ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ. ಇದರಿಂದ ಭಯಪಟ್ಟು ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಹಣವನ್ನು ಮೋಸದಿಂದ ವರ್ಗಾಯಿಸಿ ವಂಚಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.