’ನೈಸರ್ಗಿಕ ಕೃಷಿಯಿಂದ ಆರೋಗ್ಯಯುತ ಸಮಾಜ ಸೃಷ್ಟಿ’: ಹೊನ್ನಪ್ಪ ಗೌಡ

’ನೈಸರ್ಗಿಕ ಕೃಷಿಯಿಂದ ಆರೋಗ್ಯಯುತ ಸಮಾಜ ಸೃಷ್ಟಿ’: ಹೊನ್ನಪ್ಪ ಗೌಡ


ಮಂಗಳೂರು: ನೈಸರ್ಗಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ರಾಸಾಯನಿಕ ಮುಕ್ತ ತರಕಾರಿ ಹಾಗೂ ಬೆಳೆಗಳು ದೊರಕಿ  ಜನರು ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.

ಅವರು ಮಂಗಳವಾರ ಕೃಷಿ ವಿಜ್ಞಾನ ಕೇಂದ್ರ, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ  ಭಾರತ ಸರ್ಕಾರ, ಕೃಷಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ನೈಸರ್ಗಿಕ ಕೃಷಿ ಕುರಿತು ಐದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕೇಂದ್ರ ಸರ್ಕಾರದ ನೀತಿಯಂತೆ ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುತ್ತಿದ್ದು, ಸಾಂಪ್ರದಾಯಿಕವಾಗಿ ಪದ್ಧತಿಯಲ್ಲಿ ಹಾಗೂ  ಜಾನುವಾರು ಆಧಾರಿತ ಕೃಷಿ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ 2025 ಫೆಬ್ರವರಿಯಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಣ್ಣಿನ ಆರೋಗ್ಯ ಕಾಪಾಡುವುದು, ನೀರಿನ ಗುಣಮಟ್ಟ ಪರಿಶೀಲಿಸುವುದು ಮತ್ತು ಪ್ರಾಕೃತಿಕವಾಗಿ ದೊರಕುವ ವಸ್ತುಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುವುದು ಇದರ ಉದ್ದೇಶವಾಗಿದೆ ಎಂದರು. 

ಮುಂದಿನ ಮೂರು ವರ್ಷದವರೆಗೆ ಈ ಯೋಜನೆ ಜಾರಿಯಲ್ಲಿದ್ದು, ರೈತರಿಗೆ ಕೃಷಿ ಪರಿಕರಗಳ ವೆಚ್ಚ ತಗ್ಗಿಸಿ, ಯಾವುದೇ ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಇಲ್ಲದೆ ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು.

ಉಪ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ಮಣ್ಣು, ನೀರು, ಗಾಳಿ ಇವುಗಳು ಕೃಷಿಗೆ ಪೂರಕವಾದ ನೈಸರ್ಗಿಕ ಅಂಶಗಳಾಗಿವೆ. ಪರಿಸರಕ್ಕೆ ಪೂರಕವಾದ ಕೃಷಿ ಚಟುವಟಿಕೆಗಳನ್ನು ನಡೆಸುವುದು, ಮಣ್ಣಿನಲ್ಲಿ ಸಾವಯವ ಇಂಗಾಲ ಜಾಸ್ತಿ ಮಾಡುವುದು ಮತ್ತು ರಾಸಾಯನಿಕ ಬಳಕೆ ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಜೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳಿಗೆ ಹೆಚ್ಚು ಬೇಡಿಕೆ ಇದೆ. ಇದನ್ನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಸಲು ಮತ್ತು ಕೃಷಿಕರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕೃಷಿ ವಿಜ್ಞಾನ ಕೇಂದ್ರವು ಶ್ರಮಿಸುತ್ತಿದೆ ಎಂದರು. 

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಅವರು ತರಬೇತಿ ಕೈಪಿಡಿ ಬಿಡುಗಡೆ ಮಾಡಿದರು.

ಕೃಷಿ ವಿಜ್ಞಾನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಶೆಣೈ ಸ್ವಾಗತಿಸಿದರು. ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article