ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ಪ್ರಕರಣ ಪತ್ತೆ: ಮುನ್ನೆಚ್ಚರ ವಹಿಸಲು ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳಲ್ಲಿ ಕೆಲವೊಂದು ಪ್ರಕರಣಗಳು ದಾಖಲಾಗುತ್ತಿದ್ದು, ಸ್ಥಳೀಯವಾಗಿ ಹರಡುದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸುವುದು ಅತೀ ಅಗತ್ಯವಾಗಿರುತ್ತದೆ. ಶಾಲಾ ಮಕ್ಕಳಲ್ಲಿ ಅಥವಾ ಸಾರ್ವಜನಿಕರಲ್ಲಿ ಖಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣಕ್ಕೆ ಚಿಕಿತ್ಸೆಯನ್ನು ಪಡೆಯುವುದರೊಂದಿಗೆ ಸೋಂಕು ಹರಡದಂತೆ ಕ್ರಮವಹಿಸಬೇಕು.
ಚಿಕನ್ ಪಾಕ್ಸ್ ಮಕ್ಕಳಲ್ಲಿ, ಯಾವುದೇ ತೊಂದರೆ ಇಲ್ಲದೆ ಸಂಪೂರ್ಣವಾಗಿ ಗುಣವಾಗುತ್ತದೆ. ಒಮ್ಮೆ ಚಿಕನ್ ಪಾಕ್ಸ್ನಿಂದ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೊಂದುತ್ತಾನೆ. ಪೌಷ್ಠಿಕ ಆಹಾರ ಸೇವನೆಯಿಂದ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸಿಕೊಳ್ಳುವುದೂ ರೋಗ ನಿಯಂತ್ರಣದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಚಿಕನ್ ಪಾಕ್ಸ್ ಒಂದು ತೀವ್ರವಾದ ಸಾಂಕ್ರಾಮಿಕ ರೋಗ, ಇದು ವರಿಸೆಲ್ಲಾ ಜೋಸ್ಟರ್ ವೈರಸ್ನಿಂದ ಉಂಟಾಗುತ್ತದೆ. ಚಿಕನ್ ಪಾಕ್ಸ್ನಿಂದ ಚರ್ಮದ ಮೇಲಿನ ಗುಳ್ಳೆಗಳು ನೋವನ್ನು ಉಂಟು ಮಾಡುತ್ತದೆ. ಅದೇ ರೀತಿ ಕೆಮ್ಮು, ಜ್ವರ ಕೂಡ ಕಾಣಿಸಿಕೊಳ್ಳುತ್ತವೆ. ಚಿಕನ್ ಪಾಕ್ಸ್ ಸೋಂಕಿತ ವ್ಯಕ್ತಿಯ ಚರ್ಮ, ಉಸಿರು ಅಥವಾ ಸೀನಿದಾಗ ಬರುವ ದ್ರವದಿಂದ ಇತರರಿಗೆ ಹರಡುತ್ತದೆ. ವರಿಸೆಲ್ಲಾ-ಜೋಸ್ಟರ್ ವೈರಸ್ ದೇಹವನ್ನು ಪ್ರವೇಶಿಸಿದ ಮೇಲೆ 20 ರಿಂದ 21 ದಿನಗಳ ನಂತರ ಚಿಕನ್ ಪಾಕ್ಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಡೀ ದೇಹದ ಮೇಲೆ ಕಾಣಿಸಿಕೊಳ್ಳುವ ಕೆಂಪು ಬಣ್ಣದ ಗುಳ್ಳೆಗಳೇ ಮೊದಲ ಮತ್ತು ಸಾಮಾನ್ಯ ಲಕ್ಷಣ, ಅದು ಅಲ್ಲದೆ ಗುಳ್ಳೆಗಳು ಮೂಡುವ ಹಂತದಲ್ಲಿಯೇ ವ್ಯಕ್ತಿ ದೇಹದಲ್ಲಿ ನೋವನ್ನು ಹೊಂದಿ, ಅಸ್ವಸ್ಥತೆಗೆ ಒಳಗಾಗುತ್ತಾನೆ. ಇನ್ನು ಕೆಲವು ಸಾಮಾನ್ಯ ಲಕ್ಷಣಗಳೆಂದರೆ, ಗಂಟಲು ಕೆರತ, ಹಸಿವೆ ಇಲ್ಲದಿರುವುದು, ತಲೆನೋವು, ಆಯಾಸ-ಸುಸ್ತು ಕಾಣಿಸಿಕೊಳ್ಳುತ್ತದೆ. ಒಂದು ಬಾರಿ ಚಿಕನ್ ಪಾಕ್ಸ್ ಕಾಣಿಸಿಕೊಂಡರೆ ಗುಣಮುಖರಾಗಲು ಸುಮಾರು 2 ವಾರಗಳ ಸಮಯ ಬೇಕಾಗುತ್ತದೆ.
ಮುಂಜಾಗ್ರತಾ ಕ್ರಮಗಳು:
ಸೋಂಕಿತ ರೋಗಿಯ ಬೊಕ್ಕೆಗಳನ್ನು ಮುಟ್ಟಿದಾಗ ಕೈಗಳನ್ನು ಸೋಪು ಮತ್ತು ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಮನೆ,ಶಾಲೆ, ಕಿಂಡರ್ ಗಾರ್ಡನ್ ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಸೋಂಕಿತ ಮಕ್ಕಳ ಜೊತೆಗೆ ಹತ್ತಿರದ ಸಂಪರ್ಕವನ್ನು ಇಡಬಾರದು. ಸೋಂಕಿತ ಜಾಗವನ್ನು ಅಥವಾ ಮಕ್ಕಳ ಆಟಿಕೆಗಳನ್ನು ಸೋಪು ಮತ್ತು ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಅನಾರೋಗ್ಯವಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು ಹಾಗೂ ವೈದ್ಯರನ್ನು ಸಂಪರ್ಕಿಸದೇ ಔಷಧವನ್ನು ತೆಗೆದುಕೊಳ್ಳಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.