ಮುಂದಿನ ಮಳೆಗಾಲದ ಒಳಗೆ ಸೀ ಆಂಬುಲೆನ್ಸ್ ಕಾರ್ಯಾಚರಣೆ: ಸಚಿವ ಮಂಕಾಳ ಎಸ್. ವೈದ್ಯ

ಮುಂದಿನ ಮಳೆಗಾಲದ ಒಳಗೆ ಸೀ ಆಂಬುಲೆನ್ಸ್ ಕಾರ್ಯಾಚರಣೆ: ಸಚಿವ ಮಂಕಾಳ ಎಸ್. ವೈದ್ಯ


ಮಂಗಳೂರು: ಮೀನುಗಾರಿಕೆ ಸಂದರ್ಭ ಮೀನುಗಾರರ ಜೀವರಕ್ಷಣೆಗೆ ಪೂರಕವಾಗಿ ಸೀ ಆಂಬುಲೆನ್ಸ್ ಸೌಲಭ್ಯ ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದ್ದಾರೆ.

ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಮತ್ಸ್ಯ ಸಂಪದ ಯೋಜನೆಯಡಿ ಮಂಗಳೂರು ಮೀನುಗಾರಿಕೆ ಬಂದರಿನ ಆಧುನೀಕರಣ ಕಾಮಗಾರಿಗೆ ನಗರದ ಮೀನುಗಾರಿಕೆ ಬಂದರು ಸೌತ್‌ವಾರ್ಫ್‌ನಲ್ಲಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸೀ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ಮೀನುಗಾರರಿಗೆ ಭರವಸೆ ನೀಡಲಾಗಿತ್ತು. ಅದರಂತೆ ಬಜೆಟ್‌ನಲ್ಲಿ ಘೋಷಣೆಗೊಂಡು ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದರು.

ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕಾಮಗಾರಿಯನ್ನು 37.50 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ದಕ್ಕೆಯಲ್ಲಿ ಕುಡಿಯುವ ನೀರು, ಶೌಚಾಲಯ, ಚರಂಡಿ ವ್ಯವಸ್ಥೆ ಈ ಕಾಮಗಾರಿಯಲ್ಲಿ ಒಳಗೊಂಡಿದೆ. ಮಂಗಳೂರು ಬಂದರಿನ ಮೂರನೇ ಹಂತದ ವಿಸ್ತರಣೆ ಕಾಮಗಾರಿ 2014ರಲ್ಲಿ ಆರಂಭಗೊಳ್ಳಬೇಕಿದ್ದರೂ, ವಿಳಂಬವಾಗಿ ಪ್ರಸ್ತುತ 49.50 ಕೋಟಿ ರು. ವೆಚ್ಚದಲ್ಲಿ ಆರಂಭಗೊಂಡಿದೆ. ಈ ಎರಡೂ ಕಾಮಗಾರಿ ಪೂರ್ಣಗೊಂಡರೆ ಮಂಗಳೂರು ಬಂದರಿನ ಶೇ.25 ರಷ್ಟು ಸಮಸ್ಯೆಗಳು ಬಗೆಹರಿಯಲಿವೆ. ಉಳಿದ ಶೇ.75ರಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ದಂಡ ವಿಧಿಸಬೇಡಿ..

ಮೀನುಗಾರರು ಬೇರೆ ರಾಜ್ಯಗಳ ಗಡಿ ದಾಟಿದರೆ ಬೋಟ್‌ಗಳನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ. ಈ ಕ್ರಮ ಸರಿಯಲ್ಲ, ಕೇಂದ್ರ ಸರ್ಕಾರ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಮೀನುಗಾರರಿಗೆ ನೆರವು ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೀನುಗಾರರಿಗೆ ಕರರಹಿತ ಡೀಸೆಲ್ ನೀಡಲಾಗುತ್ತಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರರಿಗೆ ಲೀಟರ್‌ಗೆ 35 ರೂ. ದರದಲ್ಲಿ ಸೀಮೆಎಣ್ಣೆ ಒದಗಿಸಲಾಗುತ್ತಿದೆ. ಮೀನುಗಾರಿಕೆ ಸಂದರ್ಭ ಮೃತಪಡುವ ಮೀನುಗಾರರ ಕುಟುಂಬಕ್ಕೆ 24 ಗಂಟೆಯೊಳಗೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.

ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರರ ಆದಾಯ ದ್ವಿಗುಣಕ್ಕೆ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಮಂಗಳೂರು ಬಂದರು ಅಭಿವೃದ್ಧಿ ಯೋಜನೆ ಜೊತೆಗೆ ಕುಳಾಯಿ ಜೆಟ್ಟಿನಿರ್ಮಾಣಕ್ಕೆ 196 ಕೋಟಿ ರೂ. ಒದಗಿಸಲಾಗಿದೆ. ಈ ಪೈಕಿ ಕೇಂದ್ರ ಸರ್ಕಾರ 186 ಕೋಟಿ ರೂ. ರಾಜ್ಯ ಸರ್ಕಾರ 10 ಕೋಟಿ ರೂ. ನೀಡಿದೆ ಎಂದರು.

ಮಂಗಳೂರು ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ನಡೆಸಬೇಕು, ಲಕ್ಷದ್ವೀಪ ಜೆಟ್ಟಿ ಯೋಜನೆ ಶೀಘ್ರ ಅನುಷ್ಠಾನ ಆಗಬೇಕಿದೆ. ಜಿಲ್ಲೆಯ ಎನ್‌ಎಂಪಿಎ, ಮೀನುಗಾರಿಕಾ ಜೆಟ್ಟಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆರಿಟೈಮ್ ಬೋರ್ಡ್ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಆರಂಭಿಸುವ ಜತೆಗೆ ಮೀನುಗಾರರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಿದೆ. ಮಂಗಳೂರು ಬಂದರು ಅಭಿವೃದ್ಧಿ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಶೇ.60, ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ, ಸ್ಟೋರೇಜ್, ಹರಾಜು ಮಳಿಗೆ, ಹಾರ್ಬರ್ ಕಚೇರಿ ಕಟ್ಟಡ ಈ ಕಾಮಗಾರಿಯಲ್ಲಿ ಒಳಗೊಂಡಿದೆ ಎಂದರು.

ಮಂಗಳೂರು ಬಂದರಿನ ಮೂರನೇ ಹಂತದ ವಿಸ್ತರಣೆ ವಿರುದ್ಧ ಎನ್ಜಿಟಿಯಲ್ಲಿ ಅರ್ಜಿ ಸಲ್ಲಿಕೆಯಾದ ಕಾರಣ ಕಾಮಗಾರಿ ವಿಳಂಬಗೊಂಡಿದೆ. ಕಾಮಗಾರಿಯ ವೆಚ್ಚ ಹೆಚ್ಚಳಕ್ಕೆ ತೆರಿಗೆಯೂ ಕಾರಣವಾಗಿದೆ. ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಸೀವೀಡ್ ಬೆಳೆಗೆ ಸರ್ಕಾರ ಉತ್ತೇಜನ ನೀಡಬೇಕು, ಸೀ ಆಂಬುಲೆನ್ಸ್ ಶೀಘ್ರ ಕಾರ್ಯಗತವಾಗಬೇಕು, ಮೀನುಗಾರಿಕಾ ಇಲಾಖೆಯೇ ಡ್ರೆಜ್ಜಿಂಗ್ ಯಂತ್ರ ಖರೀದಿಸಬೇಕು ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಪೂರ್, ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಮೀನುಗಾರಿಕಾ ಇಲಾಖೆ ಜಿಲ್ಲಾ ಉಪನಿರ್ದೇಶಕ ದಿಲೀಪ್ ಕುಮಾರ್, ವರದರಾಜ್, ಮೋಹನ್ ಬೆಂಗ್ರೆ ಮತ್ತಿತರರಿದ್ದರು.

ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಸ್ವಾಗತಿಸಿದರು. ಹೆಚ್ಚುವರಿ ನಿರ್ದೇಶಕ ಸಿದ್ದಯ್ಯ ವಂದಿಸಿದರು. ಮಂಜುಳಾಶ್ರೀ ಶೆಣೈ ನಿರೂಪಿಸಿದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article