‘ತುಳುವೇತರರಿಗೆ ತುಳುವಿನ ಶ್ರೀಮಂತಿಕೆಯನ್ನು ತಿಳಿಸುವ ಕೆಲಸವಾಗಬೇಕು’: ಡಾ.ಪಾದೇಕಲ್ಲು ವಿಷ್ಣು ಭಟ್

‘ತುಳುವೇತರರಿಗೆ ತುಳುವಿನ ಶ್ರೀಮಂತಿಕೆಯನ್ನು ತಿಳಿಸುವ ಕೆಲಸವಾಗಬೇಕು’: ಡಾ.ಪಾದೇಕಲ್ಲು ವಿಷ್ಣು ಭಟ್

ಕೊಣಾಜೆ: ತುಳುವಿನ ಮೌಖಿಕ ಸಾಹಿತ್ಯದ ಕುರಿತು ಅಧ್ಯಯನ ನಡೆದಷ್ಟು ಪ್ರಾಚೀನ ತುಳು ಲಿಖಿತ ಸಾಹಿತ್ಯದ ಕುರಿತು ನಡೆದಿಲ್ಲ. ತುಳುಲಿಪಿಯಲ್ಲಿಯೇ ರಚನೆಗೊಂಡ ಮಹಾಭಾರತೊ, ಶ್ರೀಭಾಗವತೊ, ಶ್ರೀದೇವಿ ಮಹಾತ್ಮೆ, ಕಾವೇರಿ ಮೊದಲಾದ ಪಳಂತುಳು ಕೃತಿಗಳು ಲಭ್ಯವಾಗಿದ್ದು ಈ ಕುರಿತು ತುಳುನಾಡಿನಲ್ಲಿ ಹಾಗೂ ತುಳುವೇತರರಿಗೆ ತುಳುವಿನ ಈ ಶ್ರೀಮಂತಿಕೆಯನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದು ತುಳು-ಕನ್ನಡ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ ಹೇಳಿದರು.

ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿವಿ ಕಾಲೇಜು ಮಂಗಳೂರು ಸಹಯೋಗದೊಂದಿಗೆ ನಡೆಸಿದ ಪಳಂತುಳು ಸಾಹಿತ್ಯದ ಸ್ವರೂಪ ಎಂಬ ವಿಷಯದ ಕುರಿತ ವೆಬಿನಾರ್ ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು. 

ತುಳು ಅಕಾಡೆಮಿ, ತುಳುಪೀಠ ಜೊತೆ ಸೇರಿ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ತುಳು ಭಾಷೆ ಸಾಹಿತ್ಯದ ಕುರಿತ ಉಪನ್ಯಾಸಗಳನ್ನು ಏರ್ಪಡಿಸಿ ತುಳುವೇತರರಿಗೆ ತುಳುವಿನ ಪ್ರಾಚೀನತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಪಡಿಸಬೇಕು ಎಂದರು. 

ತಿಗಳಾರಿ ಲಿಪಿಯೇ ತುಳುಲಿಪಿ..

ತುಳುವಿನ ಲಿಪಿಯ ಬಗ್ಗೆ ಬಹಳ ಚರ್ಚೆಗಳಿವೆ. ತಿಗಳಾರಿ ಲಿಪಿಯನ್ನೇ ನಾವು ತುಳುಲಿಪಿ ಎನ್ನುತ್ತಿರುವುದು. ಪ್ರಾಚೀನ ಕಾಲದಲ್ಲಿ ಈ ಲಿಪಿಯಲ್ಲಿಯೇ ಬರೆಯುತ್ತಿದ್ದೆವು. ಆದರೆ, ಕಾಲಾಂತರದಲ್ಲಿ ನಿತ್ಯದ ಬಳಕೆಯಲ್ಲಿ ಬಿದ್ದು ಹೋಗಿ ಮತ್ತೆ ಕನ್ನಡ ಲಿಪಿಯಲ್ಲಿಯೇ ಬರೆಯಲು ತೊಡಗಿದೆವು. ಆದರೆ ಹಳೆಯ ತುಳುವಿನ ಶಬ್ದರೂಪ, ಸಾಹಿತ್ಯ ಸ್ವರೂಪದ ಬಗ್ಗೆ ನಾಡಿನ ಗಮನ ಹರಿದಿಲ್ಲ ಎಂದರು.

ಪಳಂತುಳುವಿನ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ತುಳು ನಿಘಂಟು ಸಹಕಾರಿಯಾಗಿದೆ. ಸಿಕ್ಕಿದ ಏಕೈಕ ಪ್ರತಿಗಳನ್ನು ಮುಂದಿಟ್ಟುಕೊಂಡು ಪುಂಡೂರು ವೆಂಕಟರಾಜ ಪುಣಿಂಚತ್ತಾಯರು ಮಾಡಿದ ಗ್ರಂಥಸಂಪಾದನೆ ತುಳುವಿಗೆ ಸಂದ ಅಪೂರ್ವ ಕೊಡುಗೆ ಎಂದರು. 

ವಿವಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆಯವರು ಮಾತನಾಡಿ, ತುಳು ಸಾಹಿತ್ಯದ ಕುರಿತು ತಿಂಗಳಿಗೊಂದು ಕನ್ನಡದಲ್ಲಿ ಉಪನ್ಯಾಸವನ್ನು ಏರ್ಪಡಿಸಲಾಗುವುದು. ಇದರಿಂದಾಗಿ ತುಳುವರಿಗೂ, ತುಳುವೇತರರಿಗೂ ತುಳುವನ್ನು ತಲಪಿಸುವ ಪ್ರಯತ್ನ ಮಾಡಲಾಗುವುದು ಎಂದರು. 

ತುಳು ಪೀಠದ ಪ್ರಸಾದ್ ಅಂಚನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article