ಸಂಸದ ಕ್ಯಾ. ಚೌಟ ಅವರ ಬ್ಯಾಕ್ ಟು ಊರು ಪರಿಕಲ್ಪನೆಗೆ ಬಿ.ವೈ. ವಿಜಯೇಂದ್ರ ಮೆಚ್ಚುಗೆ
ಬಂಗ್ರಕೂಳೂರಿನ ಗೋಲ್ಡ್‌ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ನವ ವರ್ಷದ ನವವಿಧದ ೯ನೇ ವರ್ಷದ ಕಂಬಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಂಬಳ ಎನ್ನುವುದು ಕೇವಲ ಗ್ರಾಮೀಣ ಒಂದು ಜಾನಪದ ಕ್ರೀಡೆಯಲ್ಲ. ಈ ಕಂಬಳವು ತುಳುನಾಡಿನ ಅಸ್ಮಿತೆಯ ಪ್ರತೀಕ. ಇಂಥಹ ಕಂಬಳ ವೇದಿಕೆಯಲ್ಲಿ ಕ್ಯಾ. ಚೌಟ ಅವರು ತಮ್ಮ ‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ತಾಯ್ನಾಡಿಗೆ ವಾಪಸ್ಸಾಗಿ ಈ ತುಳುನಾಡಿಗೆ ಕೊಡುಗೆ ನೀಡುತ್ತಿರುವ ಕರಾವಳಿ ಭಾಗದ ಯಶಸ್ವಿ ಉದ್ಯಮಿಗಳನ್ನು ಗುರುತಿಸಿ ಅಂಥಹ ಸಾಧಕರನ್ನು ಗೌರವಿಸುತ್ತಿರುವುದು ಕೂಡ ಪ್ರಶಂಸನೀಯ ಹಾಗೂ ಮಾದರಿಯ ನಡೆ ಎಂದರು.
ಕ್ಯಾ. ಬ್ರಿಜೇಶ್ ಚೌಟ ಅವರು ಕಳೆದ 8 ವರ್ಷಗಳಿಂದ ಮಂಗಳೂರು ಕಂಬಳವನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಗ್ರಾಮೀಣ ಭಾಗದ ಜನರಂತೆ ಪ್ರಸ್ತುತ ನಗರ ಭಾಗದಲ್ಲಿಯೂ ಕಂಬಳದ ಸದ್ದು ಮೊಳಗುತ್ತಿದ್ದರೆ ಅದಕ್ಕೆ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಂಗಳೂರು ಕಂಬಳದ ಕೊಡುಗೆ ಗಮನಾರ್ಹವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ತುಳುನಾಡಿನ ಕಲೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಲು ಈ ಕಂಬಳವನ್ನು ನಡೆಸಲಾಗುತ್ತಿದೆ. ಈ ಬಾರಿ ರಾಷ್ಟ್ರ ಜಾಗೃತಿಯ ಕಾರ್ಯಕ್ರಮ, ‘ಬ್ಯಾಕ್ ಟು ಊರು’ ಸೇರಿದಂತೆ ನವ-ವಿಧ ಕಾರ್ಯಕ್ರಮಗಳ ಮೂಲಕ ಮಂಗಳೂರು ಕಂಬಳವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.
‘ಬ್ಯಾಕ್ ಟು ಊರು’ ಉದ್ಯಮಿಗಳಿಗೆ ಸನ್ಮಾನ:
ದೇಶ-ವಿದೇಶದಲ್ಲಿ ಉದ್ಯಮ ಅಥವಾ ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿ ನೆಲೆಸಿದ್ದವರು ವಾಪಾಸ್ ತಾಯ್ನಾಡಿಗೆ ಬಂದು ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ ಯಶಸ್ವಿ 10 ಉದ್ಯಮಿಗಳನ್ನು ಗುರುತಿಸಿ ಗೌರವಿಸಿರುವುದು ಬ್ಯಾಕ್ ಟು ಊರಿಗೆ ಮತ್ತಷ್ಟು ಮಂಗಳೂರಿಗರು ಹಿಂದಿರುಗಲು ಪ್ರೇರಣೆ ನೀಡಿರುವುದು ಈ ಬಾರಿಯ ಮಂಗಳೂರು ಕಂಬಳದ ಬಹಳ ವಿಶೇಷತೆಯಾಗಿದೆ.
ಕಂಬಳಕ್ಕೆ ಮೆರುಗು ತಂದ ಮೇರಿ ಕೋಮ್:
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರು ಮಂಗಳೂರು ಕಂಬಳದಲ್ಲಿ ಪಾಲ್ಗೊಂಡು ಕರಾವಳಿಯ ಈ ಜಾನಪದ ಕ್ರೀಡೆಯನ್ನು ಪ್ರೋತ್ಸಾಹಿಸಿದ್ದಾರೆ. ಈ ವೇಳೆ ಅವರಿಗೆ ಕಂಬಳದ ಬೆತ್ತ ಹಾಗೂ ಕಂಬಳ ಕೋಣಗಳ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಾನು ಇದೇ ಮೊದಲ ಬಾರಿಗೆ ನೇರವಾಗಿ ಕಂಬಳವನ್ನು ನೋಡುತ್ತಿದ್ದು, ಬಹಳ ಖುಷಿ ನೀಡಿದೆ. ನಿಜಕ್ಕೂ ಇದೊಂದು ಅಪರೂಪವಾದ ಕ್ರೀಡಾ ಸಂಭ್ರಮ ಎಂದು ಮಂಗಳೂರು ಕಂಬಳವನ್ನು ಬಣ್ಣಿಸಿದ್ದಾರೆ.
ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಡಾ.ವೈ. ಭರತ್ ಶೆಟ್ಟಿ, ರಾಜೇಶ್ ನಾ?ಕ್, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಬಿ.ನಾಗರಾಜ ಶೆಟ್ಟಿ, ಪ್ರಮುಖರಾದ ಶಶಿಧರ ಶೆಟ್ಟಿ ಬರೋಡಾ ಸೇರಿದಂತೆ ಹಲವು ಉದ್ಯಮಿಗಳು, ಗಣ್ಯರು, ಜನನಾಯಕರು ಭಾಗವಹಿಸಿದ್ದರು.