ಅಶಕ್ತರು, ಬಲಹೀನರ ಪರವಾಗಿ ಕೆಲಸ ಮಾಡಬೇಕು: ಡಾ. ಎಂ. ಮೋಹನ ಆಳ್ವ
ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾದಳ ಮತ್ತು ಶ್ರೀ ನಾರಾಯಣ ಗುರು ಮಹಿಳಾ ಘಟಕ, ಅಮೃತ ಮಹೋತ್ಸವ ಸಮಿತಿ ಇದರ ನೇತೃತ್ವದಲ್ಲಿ ಸಂಘದ ಅಮೃತ ಮಹೋತ್ಸವ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನಗೈದರು. ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಮಾಜ ಒಗ್ಗೂಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ನಡೆಸಬೇಕು. ಕೌಟುಂಬಿಕ ಜೀವನಕ್ಕೆ ಒತ್ತು ನೀಡಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಘಟನಾ ಶಕ್ತಿಗೆ ಪ್ರೇರೇಪಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸಚಿವ ಕೆ ಅಭಯಚಂದ್ರ ಮಾತನಾಡಿ ಬಿಲ್ಲವ ಸಮಾಜ ನನ್ನೊಂದಿಗೆ ಬಲವಾಗಿ ನಿಂತು ನಾಲ್ಕು ಬಾರಿ ಶಾಸಕನಾಗಲು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಬಿಲ್ಲವ ಸಮಾಜಕ್ಕೆ ಅಭಾರಿ ಆಗಿರುವುದಾಗಿ ಹೇಳಿದರು. ಕುವೈಟ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಾಘು ಸಿ. ಪೂಜಾರಿಯವರು ಮೂಡುಬಿದಿರೆ ಸಂಘದ ಮಹತ್ವಕಾಂಕ್ಷಿ ಒಂದು ಕೋಟಿ ರೂಪಾಯಿಯ ಅಮೃತ ವಿದ್ಯಾನಿಧಿಗೆ ಚಾಲನೆ ನೀಡಿ ತನ್ನ ವೈಯಕ್ತಿಕ 5ಲಕ್ಷ ರೂಪಾಯಿ ದೇಣಿಗೆ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಚಾರ್ಟರ್ಡ್ ಅಕೌಂಟೆಂಟ್ ರಘುಪತಿ ಭಟ್, ಕರ್ನಿರೆ ಸುವರ್ಣ ಪ್ರತಿಷ್ಠಾನದ ಪ್ರಭಾಕರ ಡಿ ಸುವರ್ಣ ದುಬೈ, ಕರ್ನಾಟಕ ಉಚ್ಚ ನ್ಯಾಯಾಲಯದ ಪದಾಂಕಿತ ಹಿರಿಯ ನ್ಯಾಯವಾದಿ ತಾರಾನಾಥ್ ಪೂಜಾರಿ, ಚಲನಚಿತ್ರ ನಟ ಉದ್ಯಮಿ ಡಾ. ರಾಜಶೇಖರ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಲಾಯಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್ ಪೂಜಾರಿ ಉಪಸ್ಥಿತರಿದ್ದರು.
ಸನ್ಮಾನ: ಹಿರಿಯ ಸಾಹಿತಿ ಹಾಗೂ ತುಳು ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮತ್ತು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ ಚಿತ್ತರಂಜನ್ ಅವರನ್ನು ಅಮೃತ ರತ್ನ ಬಿರುದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಕಬಡ್ಡಿ ವಿಶ್ವಕಪ್ ನಲ್ಲಿ ಗೆಲುವಿನ ನಗೆ ಬೀರಿದ ಧನಲಕ್ಷ್ಮಿ ಪೂಜಾರಿ, ಸಂಘದ ಸ್ಥಾಪಕ ಸದಸ್ಯ ಪಿ ಕೆ ರಾಜು ಪೂಜಾರಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಎಸ್ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಕಯ್ಯ ಪೂಜಾರಿ ಅಳಿಯೂರು ಹಾಗೂ ಗೋಪಾಲ ಪೂಜಾರಿ ಮಾರೂರು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಮೃತ ಮಹೋತ್ಸವ ಸಮಿತಿಯ ನಾರಾಯಣ ಪಿ ಎಂ, ಡಾ ಮುರಳಿಕೃಷ್ಣ ಆರ್.ವಿ ಡಾ ರಮೇಶ್ ಈ ಸಂದಭ೯ದಲ್ಲಿದ್ದರು.
ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿ ಉಮೇಶ್ ಪೈ ಮೆರವಣಿಗೆಗೆ ಚಾಲನೆ ನೀಡಿದರು.